ಹಾಡಹಗಲೇ ಬಸ್ ನಿಲ್ದಾಣದಲ್ಲಿ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ
12/03/2021
ಕೋಲಾರ: ಪ್ರಯಾಣಿಕರ ತಂಗುದಾಣದಲ್ಲಿ ಮಲಗಿದ್ದ ವೃದ್ಧೆಯ ಮೇಲೆ ಹಾಡಹಗಲೇ ಇಬ್ಬರು ಕಾಮುಕರು ಅತ್ಯಾಚಾರ ನಡೆಸಿರುವ ಆತಂಕಕಾರಿ ಘಟನೆ ಕೆಜಿಎಫ್ ತಾಲೂಕಿನ ಬೆಟ್ಕೂರು ತಂಗುದಾಣದಲ್ಲಿ ನಡೆದಿದೆ.
ಪೋಸ್ಟರ್ ಅಂಟಿಸಲು ಆಟೋದಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ವೃದ್ಧೆಯ ಮೇಲೆ ಅತ್ಯಾಚಾರ ನಡೆಸುತ್ತಿರುವ ವೇಳೆ ಸ್ಥಳೀಯರು ಈ ಪ್ರದೇಶಕ್ಕೆ ಅಚಾನಕ್ಕಾಗಿ ಬಂದಿದ್ದಾರೆ. ಸ್ಥಳೀಯರನ್ನು ನೋಡುತ್ತಿದ್ದಂತೆಯೇ ಆರೋಪಿಗಳು ಆಟೋ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಕಾಮುಕರು ಓಡಿ ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಆಟೋ ನಂಬರ್ ನ್ನು ಕೂಡ ನೋಟ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಯಾಣಿಕರ ತಂಗುದಾಣ ಗ್ರಾಮದಿಂದ ಸ್ವಲ್ಪ ದೂರದಲ್ಲಿದೆ. ಹೀಗಾಗಿ ಇಲ್ಲಿ ಅಷ್ಟಾಗಿ ಪ್ರಯಾಣಿಕರು ಬರುವುದಿಲ್ಲ. ಸಂತ್ರಸ್ತ ವೃದ್ಧೆ ಮಾನಸಿಕ ಅಸ್ವಸ್ಥೆಯಾಗಿದ್ದು, ಈಕೆಯ ಕುಟುಂಬಸ್ಥರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ.