ತನ್ನ ಪರವಾಗಿ ಬ್ಯಾಟಿಂಗ್ ಮಾಡಿದ ಶಾಸಕನಿಗೇ ನೋಟಿಸ್ ಜಾರಿ ಮಾಡಿದ ಡಿ.ಕೆ.ಶಿವಕುಮಾರ್! - Mahanayaka

ತನ್ನ ಪರವಾಗಿ ಬ್ಯಾಟಿಂಗ್ ಮಾಡಿದ ಶಾಸಕನಿಗೇ ನೋಟಿಸ್ ಜಾರಿ ಮಾಡಿದ ಡಿ.ಕೆ.ಶಿವಕುಮಾರ್!

d k shivakumar
01/07/2025

ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗ್ತಾರೆ ಎಂದು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಇದೀಗ ಯಾಕಾದ್ರೂ ಈ ಹೇಳಿಕೆ ನೀಡಿದೆ ಅಂತ ಪಶ್ಚಾತಾಪ ಪಡುವಂತಾಗಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದ ಇಕ್ಬಾಲ್ ಹುಸೇನ್ ಗೆ ಇದೀಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರೇ ನೋಟಿಸ್ ಇಶ್ಯೂ ಮಾಡಲು ಮುಂದಾಗಿದ್ದಾರೆ.

ಇಕ್ಬಾಲ್ ಹುಸೇನ್ ಹೇಳಿಕೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನನಗೆ ಯಾರು ಸಿಎಂ ಆಗ್ತೀನಿ ಅಂತ ಹೇಳುವ ಅವಶ್ಯಕತೆ ಇಲ್ಲ. ಇವತ್ತೋ ನಾಳೆನೋ ಅವನಿಗೆ ನೋಟಿಸ್ ಇಶ್ಯೂ ಮಾಡ್ತೀನಿ. ನನಗೆ ಯಾರೂ ಹೇಳುವುದು ಬೇಡ. ಮಾಧ್ಯಮದ ಮುಂದೆ ಮುಂದೆ ಯಾರು ಹೋಗಬಾರದು. ಇಕ್ಬಾಲ್ ಹುಸೇನ್‌ ಗೂ ಹೇಳೋದು ಅಷ್ಟೇ, ಬಿ.ಆರ್‌. ಪಾಟೀಲ್‌, ಬಾಲಕೃಷ್ಣಗೆ ಹೇಳೋದೂ ಇಷ್ಟೆ. ಇದನ್ನೆಲ್ಲ ಹೇಳುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಇದ್ದಾರೆ. ಅವರ ಕೈ ಬಲಪಡಿಸುವುದು, ನಮ್ಮ ಸರ್ಕಾರದ ಕೈ ಬಲಪಡಿಸೋದು ಅಷ್ಟೇ ನಮ್ಮ ಗುರಿ ಎಂದು ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ಸೋಮವಾರ ರಾಮನಗರದಲ್ಲಿ ಮಾತನಾಡಿದ್ದ ಇಕ್ಬಾಲ್ ಹುಸೇನ್, ಇನ್ನು ಎರಡು ಮೂರು ತಿಂಗಳಲ್ಲಿ ಹೈಕಮಾಂಡ್ ಒಂದು ತೀರ್ಮಾನಕ್ಕೆ ಬರುತ್ತದೆ. ನಾನು ಸುತ್ತಿ ಬಳಸಿ ಮಾತನಾಡುತ್ತಿಲ್ಲ. ಎರಡು ಮೂರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಗೆ ಸಿಎಂ ಸ್ಥಾನ ಸಿಗಲಿದೆ ಎಂದಿದ್ದರು.

ಇಕ್ಬಾಲ್ ಹುಸೇನ್ ಗೆ ನೋಟಿಸ್ ಜಾರಿ:

ಡಿ.ಕೆ.ಶಿವಕುಮಾರ್ ಅವರು ನೋಟಿಸ್ ಇಶ್ಯೂ ಮಾಡಿಸ್ತೀನಿ ಎಂದ ಕೆಲವೇ ಗಂಟೆಗಳಲ್ಲಿ ಇಕ್ಬಾಲ್ ಹುಸೇನ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ತಾವು ಇಂದು ಮಾಧ್ಯಮಗಳಿಗೆ ಮುಖ್ಯಮಂತ್ರಿಗಳ ಬದಲಾವಣೆ ವಿಷಯದಲ್ಲಿ, ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟುಮಾಡುವಂತಹ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿರುತ್ತೀರಿ. ತಮ್ಮ ಈ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆ ಆಗಿರುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟೀಸು ನೀಡಲಾಗಿದೆ. ತಾವುಗಳು ಈ ನೋಟೀಸು ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಲು ಸೂಚಿಸಲಾಗಿದೆ ಎಂದು ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ