ಪುತ್ತೂರು: ಮದುವೆಯ ಭರವಸೆ ನೀಡಿ ವಂಚನೆ, ದೌರ್ಜನ್ಯ ಪ್ರಕರಣ: ಸಂತ್ರಸ್ತೆಗೆ ನ್ಯಾಯ ಒದಗಿಸಲು ಜನವಾದಿ ಮಹಿಳಾ ಸಂಘಟನೆ ಆಗ್ರಹ

ಪುತ್ತೂರು: ತಾಲೂಕಿನ ಕಾಲೇಜು ವಿದ್ಯಾರ್ಥಿನಿಯನ್ನು, ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ರಾವ್ ಪ್ರೀತಿಯ ನೆಪದಲ್ಲಿ ನಂಬಿಸಿ, ಮದುವೆಯಾಗುವ ಭರವಸೆ ನೀಡಿ ಬಲವಂತದಲ್ಲಿ ದೈಹಿಕ ಸಂಪರ್ಕ ಬೆಳಸಿರುವುದು, ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ತರುವಾಯ, ಜಗನ್ನಿವಾಸ ರಾವ್ ಕುಟುಂಬ ಮದುವೆಗೆ ನಿರಾಕರಿಸಿ ವಂಚಿಸಿರುವುದು, ಗರ್ಭಪಾತಕ್ಕೆ ಒತ್ತಾಯಿಸಿ ಬೆದರಿಸಿರುವ ಘಟನೆಯನ್ನು ಜನವಾದಿ ಮಹಿಳಾ ಸಂಘಟನೆ ಬಲವಾಗಿ ಖಂಡಿಸಿದೆ.
ಈ ಪ್ರಕರಣ ಬಿಜೆಪಿ, ಸಂಘ ಪರಿವಾರದ ಮುಖವಾಡಗಳನ್ನೂ ಬಯಲಿಗೆ ತಂದಿದೆ. ಆರೋಪಿ ಭಿನ್ನ ಧರ್ಮಕ್ಕೆ ಸೇರಿದ್ದಲ್ಲಿ ಸಂತ್ರಸ್ತ ಮಹಿಳೆಯರ ಪರ ವೀರಾವೇಶದಿಂದ ಬೀದಿಗಿಳಿಯುವ, ಹಿಂಸಾತ್ಮಕ ಪ್ರತಿಭಟನೆಗೆ ಕುಮ್ಮಕ್ಕು ಕೊಡುವ, ಮಹಿಳೆ, ಮಾತೆ ಎಂದು ಭಾಷಣ ಬಿಗಿಯುವ ಬಿಜೆಪಿ ಮುಖಂಡರು ಪುತ್ತೂರಿನ ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕನ ಕುಟುಂಬದಿಂದಲೆ ಸ್ವ ಧರ್ಮದ, ಸಾಮಾಜಿಕವಾಗಿ ದರ್ಬಲರಾದ ಕುಟುಂಬದ ಹೆಣ್ಣು ಮಗಳಿಗೆ ಘೋರ ಅನ್ಯಾಯ ಆದರೂ ತುಟಿ ಬಿಚ್ಚದಿರುವುದು, ಬದಲಿಗೆ, ಜುಜುಬಿ ಪರಿಹಾರ ಧನ ಪಡೆದು ಗರ್ಭಪಾತ ಮಾಡಿಸಿಕೊಳ್ಳಲು, ದೂರು ದಾಖಲಿಸದೆ ಇರಲು ಒತ್ತಾಯ ಮಾಡಿರುವುದು ಬಿಜೆಪಿ ಪರಿವಾರದ ಗೋಮುಖ ವ್ಯಾಘ್ರತನವನ್ನು ಎತ್ತಿತೋರಿಸಿದೆ. ಆ ಮೂಲಕ ಪರಿವಾರದ ಮುಖವಾಡ ಕಳಚಿ ಬಿದ್ದಿದೆ ಎಂದು ಜನವಾದಿ ಮಹಿಳಾ ಸಂಘ ಕಟುವಾಗಿ ಟೀಕಿಸಿದೆ.
ಸಂತ್ರಸ್ತ ವಿದ್ಯಾರ್ಥಿನಿ ಹಾಗೂ ಕುಟುಂಬ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ಜನವಾದಿ ಮಹಿಳಾ ಸಂಘಟನೆ ಅವರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಅದು ಹೇಳಿದ್ದು, ಪೊಲೀಸ್ ಇಲಾಖೆ ಯಾವುದೆ ಪ್ರಭಾವಕ್ಕೆ ಮಣಿಯದೆ ಕೃಷ್ಣ ರಾವ್ ಹಾಗೂ ಆತನ ಪೋಷಕರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳಬೇಕು, ರಾಜಿ ಪಂಚಾಯತಿಯ ನೆಪದಲ್ಲಿ ಹಣ ಪಡೆದು ಗರ್ಭಪಾತ ಮಾಡಿಸಿಕೊಳ್ಳುವಂತೆ, ಮದುವೆಯ ಬೇಡಿಕೆ ಇಡದಂತೆ ವಿದ್ಯಾರ್ಥಿನಿಯ ಕುಟುಂಬವನ್ನು ಒತ್ತಾಯಿಸಿದ ಸಂಘ ಪರಿವಾರದ ನಾಯಕರನ್ನೂ ಪ್ರಕರಣದಲ್ಲಿ ಆರೋಪಿಗಳಾಗಿಸುವಂತೆ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಜಯಂತಿ ಬಿ. ಶೆಟ್ಟಿ, ಕಾರ್ಯದರ್ಶಿ ಭಾರತಿ ಬೋಳಾರ ದ.ಕ. ಜಿಲ್ಲಾ ಸಮಿತಿ ಪೊಲೀಸ್ ವರಿಷ್ಟಾಧಿಕಾರಿಯನ್ನು ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD