ವಾಹನಗಳಿಗೂ ಬಿಪಿ, ಶುಗರ್, ಕ್ಯಾನ್ಸರ್! - Mahanayaka

ವಾಹನಗಳಿಗೂ ಬಿಪಿ, ಶುಗರ್, ಕ್ಯಾನ್ಸರ್!

dammapriya
03/07/2025

—  ದಮ್ಮಪ್ರಿಯ, ಬೆಂಗಳೂರು

ಇತ್ತೀಚೆಗೆ ವಾಹನಗಳ ಟೋಲ್ ಸುಂಕದಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳ ಮಾಡಿರುವ, ವಾಹನದ ಮಾಲಿಕರಿಗೆ ಮತ್ತೊಂದು ಬರೆಯನ್ನು ಎಳೆಯುವ ಮೂಲಕ ಇಂದಿನ ಸರ್ಕಾರಗಳು ಯಾರ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ, ಎನ್ನುವುದೇ ಸಾಮಾನ್ಯ ಜನರ ಮೂಕರೋದನೆಯಾಗಿದೆ.

ದೇಶದಲ್ಲಿ ನಾನಾ ರೀತಿಯ ಅರಾಜಕತೆಗಳು ನಡೆಯುತ್ತಿದ್ದು, ಟಿವಿ ಚಾನಲ್ ಗಳ ಮುಂದೆ ಕುಳಿತರೆ ಸಾಕು ಬಹಳಷ್ಟು ಬೇಸರಗೊಳ್ಳುತ್ತಿದ್ದ ಜನಸಾಮಾನ್ಯರಿಗೆ ಮತ್ತೊಂದು ರೀತಿಯ ಬೇಸರದ ಸಂಗತಿ ವಾಹನ ಖರೀದಿ ಸಮಯದಲ್ಲಿ ವಸೂಲಿ ಮಾಡುವ ರಸ್ತೆ ತೆರಿಗೆ (Road Tax) ಎನ್ನುವ ಬಹುದೊಡ್ಡ ಮಾರಿ ಗ್ರಾಹಕರಿಗೆ ಬಹುದೊಡ್ಡ ಬರೆಯಾಗಿದೆ. ಈಗಾಗಲೇ  ವಾಹನ ಕಂಪನಿಗಳು  ಶೋರೂಮ್ ಮುಖಬೆಲೆಯ ಮೇಲೆ ಸುಮಾರು 18 ರಿಂದ 20 ಶೇಕಡ ರಸ್ತೆ ತೆರಿಗೆಯನ್ನು ವಸೂಲಿ ಮಾಡುತ್ತಿದ್ದು, 10 ಲಕ್ಷ ರೂಪಾಯಿಯ ಕಾರನ್ನು ಖರೀದಿ ಮಾಡುವವರು ಸುಮಾರು 180,000 ಯಿಂದ 200,000 ಲಕ್ಷದವರೆಗೂ ರಸ್ತೆ ತೆರಿಗೆ ಎಂದು ವಸೂಲಿ ಮಾಡಿ ಕಂಪನಿಗಳ ಖಜಾನೆಗೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಈಗಾಗಲೇ ಬಹುಕೋಟಿ ಹಣವನ್ನು ಸಾರ್ವಜನಿಕರು ನೀಡುತ್ತಿವೆ. ಆದರೆ ಸರ್ಕಾರಗಳು ನಿರ್ಮಿಸುತ್ತಿರುವ ಯಾವುದೇ ರಸ್ತೆಗಳಲ್ಲೂ ಸಾಮಾನ್ಯ ಜನರು ತಮ್ಮ ವಾಹನಗಳ ಮೂಲಕ ಪ್ರಯಾಣಿಸುವುದು ಬಹಳ ಕಷ್ಟಕರವಾದ ಸಂಗತಿಯಾಗಿದೆ.

ವಾಹನದ ಮಾಲೀಕರು ಈಗಾಗಲೇ ತಮ್ಮ ವಾಹನಗಳನ್ನು ರಸ್ತೆ ಮೇಲೆ ತರಲು ವಾಹನ ಖರೀದಿಸುವ ಸಮಯದಲ್ಲೇ ರೋಡ್ ಟ್ಯಾಕ್ಸ್ ಎಂದು ಪಾವತಿಸಿದ್ದರೂ ಮತ್ತೆ ರಸ್ತೆ ಸುಂಕ ಎಂದು ಪಾವತಿಸಬೇಕಾದ ಅಗತ್ಯವಾದರೂ ಏನಿದೆ ? ಹಾಗಾದರೆ ಈಗಾಗಲೇ ವಾಹನ ಖರೀದಿದಾರರು ಪಾವತಿಸಿರುವ ರಸ್ತೆ ತೆರಿಗೆ,  ಹಣವನ್ನು ಯಾವ ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗಿದೆ.  ಹೊಸ ವಾಹನಗಳು ರಸ್ತೆಗೆ ಬಂದಿಳಿಯುವ ಮೊದಲೇ ಕಂಪನಿಗಳ ಮುಖಾಂತರ ಸರ್ಕಾರಗಳು ರಸ್ತೆ ತೆರಿಗೆಯನ್ನು ವಸೂಲಿ ಮಾಡಿದ ಮೇಲೆ ಮತ್ತೊಮ್ಮೆ ರಸ್ತೆ ಸುಂಕವನ್ನ ಕಟ್ಟುವ ಅಗತ್ಯವಾದರೂ ಏನಿದೆ ?  ರಸ್ತೆ ತೆರಿಗೆ ಎನ್ನುವುದು ಒಂದು ರೀತಿಯಲ್ಲಿ ವಾಹನಕೊಳ್ಳುವ ಮಾಲೀಕರಿಗೆ ರಕ್ತದ ಒತ್ತಡದ (ಬಿಪಿ) ರೂಪವಾದರೆ, ರಸ್ತೆ ಸುಂಕ ಎನ್ನುವುದು ಒಂದು ರೀತಿಯ ಸಕ್ಕರೆ ಕಾಯಿಲೆಯಾಗಿದ್ದು ಪ್ರತಿನಿತ್ಯವೂ ತೆಗೆದುಕೊಳ್ಳುವ ಗುಳಿಗೆಯಾಗಿದೆ. ಇನ್ನು ಮುಂದುವರೆದಂತೆ ಇನ್ಶೂರೆನ್ಸ್ ಅನ್ನುವುದು ಬಹುದೊಡ್ಡ ಕಾಯಿಲೆಯಾಗದ ಕ್ಯಾನ್ಸರ್ ರೀತಿಯ ಮಾರಕ ರೋಗದಂತಾಗಿದೆ. ಈ ಇನ್ಶುರೆನ್ಸ್ ಕಂಪನಿಗಳು ವಾಹನಗಳ ವಿಮೆಯ ಜೊತೆಗೆ ಮೂರನೇ ವ್ಯಕ್ತಿಯ ವಿಮೆಯನ್ನು ಕಡ್ಡಾಯಗೊಳಿಸಿದ್ದು ಒಂದು ರೀತಿಯ ಹಗಲು ದರೋಡೆಯಾಗಿದ್ದು ಜನಸಾಮಾನ್ಯರು ಬೇಸತ್ತು ಬದುಕುವಂತೆ ಮಾಡಿಬಿಟ್ಟಿವೆ. ಈ ಮೂರು ಮನುಷ್ಯನ ಬದುಕಿನಲ್ಲಿ ಹೇಗೆ ಅಂಟಿಕೊಂಡ ಕಾಯಿಲೆಗಳಾಗಿವೆಯೋ ಹಾಗೆಯೇ ಇನ್ಸೂರೆನ್ಸ್ ಎನ್ನುವುದು ಒಂದು ಕ್ಯಾನ್ಸರ್ ಆಗಿದ್ದು ರಸ್ತೆ ತೆರಿಗೆ ಎನ್ನುವುದು ರಕ್ತದ ಒತ್ತಡದ ಕಾಯಿಲೆಯಾದರೆ ವಿಮೆಗಳು ಸಕ್ಕರೆ ಕಾಯಿಲೆ ರೀತಿಯ ಪ್ರತಿವರ್ಷದ ಗುಳಿಗೆಗಳಾಗಿವೆ.

ಮಂಟೇಸ್ವಾಮಿ ಕಾವ್ಯ ಪ್ರಸಂಗದಲ್ಲಿ ಕಾಲಜ್ಞಾನಿ ಮಂಟೇಸ್ವಾಮಿ ಹೇಳಿದ ಹಾಗೆ, ಮುಂದೊಂದು ದಿನ ಈ ಭೂಮಿಯ ಮೇಲೆ ಕಲಿಯುಗ ಪ್ರಾರಂಭವಾಗಿ  ಜನರು ಓಡಾಡುವ ರಸ್ತೆಗೆ ಸುಂಕ ಕಟ್ಟಬೇಕಾಗುತ್ತದೆ. ಕುಡಿಯುವ ನೀರಿಗೆ ಬೆಲೆ ಕಟ್ಟಬೇಕಾಗುತ್ತದೆ. ಅನ್ನವನ್ನು ತಕ್ಕಡಿಯಲ್ಲಿ ಹಾಕಿ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸುತ್ತಾ, ಜೀವಂತವಾಗಿ ಸಮಾಧಿಯಾಗುತ್ತಾರೆ. ಈ ಮಾತನ್ನ ಇಂದು ನಾವು ನೆನಪಿಸಿಕೊಳ್ಳಬೇಕಾಗಿದೆ. ಸರ್ಕಾರಗಳು ಜನಸಾಮಾನ್ಯರ ಅಭಿವೃದ್ಧಿ ಎನ್ನುವ ನೆಪದಲ್ಲಿ ಒಮ್ಮೆ ರಸ್ತೆ ಅಭಿವೃದ್ಧಿ ಮತ್ತೊಮ್ಮೆ ಹಾಸ್ಪಿಟಲ್ ಗಳ ಅಭಿವೃದ್ಧಿ, ಮತ್ತೊಮ್ಮೆ ಉದ್ಯೋಗ ಸೃಷ್ಟಿಯ ನೆಪದಲ್ಲಿ ಕಂಪನಿಗಳ ಮರುಸ್ಥಾಪನೆಗೆ ರೈತರ ಕೃಷಿ ಭೂಮಿಯ ಕಬಳಿಕೆ, ಇವುಗಳನ್ನು ಮಾಡುತ್ತಿದ್ದು ದೇಶವನ್ನು ದೊಡ್ಡ ಸಾಲದ ರಾಷ್ಟ್ರವನ್ನಾಗಿ ಮಾಡಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ 122ನೇ ಸ್ಥಾನದಲ್ಲಿ ಕುಳಿತಿರುವುದು ಈ ದೇಶದ ದುರಂತದ ಸ್ಥಿತಿಯಾಗಿದೆ.  ಜನಸಾಮಾನ್ಯರು ಈಗಾಗಲೇ ತಾವು ಸಂಪಾದಿಸುವ ಹಣಕ್ಕೆ ಶೇಕಡಾ 30% ರಷ್ಟು ತೆರಿಗೆಯನ್ನು ಕಟ್ಟುತ್ತಿದ್ದರು, ಇನ್ನುಳಿದ ಸಂಪಾದನೆಯಲ್ಲಿ ತಾವು ಕೊಳ್ಳುವ ಪದಾರ್ಥಗಳಿಗೆ ಶೇಕಡ 18% ಜಿ ಎಸ್ ಟಿ ಯನ್ನು ಪಾವತಿಸುತ್ತಿದ್ದಾರೆ. ಈಗಾಗಲೇ ತೆರಿಗೆ ಮತ್ತು ಜಿಎಸ್‌ಟಿಯ ಹೊಡೆತದಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೆ ವಾಹನಗಳ ಮೇಲಿನ ಸುಂಕ ಮತ್ತೊಂದು ರೀತಿಯ ಬರೆಯಾಗಿದೆ.

ವಾಹನಗಳ ಈ ರಸ್ತೆ ಸುಂಕದ ಜೊತೆಗೆ ಪೆಟ್ರೋಲ್ ಡೀಸೆಲ್ ದರಗಳು ಗಗನಕ್ಕೇರಿದ್ದು, ವಾಹನದ ಮಾಲೀಕರು ನಲುಗುವಂತಾಗಿದೆ. ಡೀಸೆಲ್ ಬೆಲೆ ಹೆಚ್ಚಾಗಿರುವುದರಿಂದ ಅದರ ಬಳಕೆ ಕಡಿಮೆ ಆಗಬೇಕು ಎನ್ನುವ ಮಾನಸಿಕ ಗೊಂದಲವನ್ನು ಸೃಷ್ಟಿಸಿ ಜನಸಾಮಾನ್ಯರು ವಿದ್ಯುತ್ ಬಳಕೆಯ ವಾಹನವನ್ನು ಖರೀದಿಸುವಂತೆ ಪ್ರಚೋದಿಸಲಾಯಿತು. ಅಲ್ಲದೆ ವಿದ್ಯುತ್ ಬಳಕೆಯಲ್ಲಿ ಮತ್ತು ಯೂನಿಟ್ ಗಳ  ಮೂಲಕ ಹೆಚ್ಚು ಹಣವನ್ನು ವಸೂಲಿ ಮಾಡಲಾಯಿತು. ವಿದ್ಯುತ್ ಬಳಕೆ ವಾಹನಗಳ ಕಂಪನಿಗಳಿಗೆ ಬಹು ಕೋಟಿ ಹಣವನ್ನು ಲಾಭ ಗಳಿಸುವಂತೆ ತಂತ್ರಗಾರಿಕೆ  ಬಳಸಲಾಯಿತು. ಇದರಿಂದ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಆಳುವ ಸರ್ಕಾರಗಳು ಎಲ್ಲರೂ ವಿದ್ಯುತ್ ವಾಹನಗಳನ್ನು ಬಳಸಲೇಬೇಕು ಅದಕ್ಕಾಗಿ ತೈಲ ಬೆಲೆಗಳನ್ನು ಹೆಚ್ಚಿಸಲಾಗಿದೆ ಎನ್ನುವ ಕೆಲಸಕ್ಕೆ ಬಾರದ ಮಾತುಗಳನ್ನು ಜನಸಾಮಾನ್ಯರ ತಲೆಗೆ ತುಂಬಿ ವಿದ್ಯುತ್ ವಾಹನಗಳನ್ನು ಕೊಂಡುಕೊಳ್ಳಲು ಪ್ರಚೋದಿಸಿತು.  ಇದರಿಂದ ಆಳುವ ಸರ್ಕಾರಗಳಿಗೆ ಕಂಪನಿಗಳು ತಮಗೆ ಬಂದ  ಲಾಭದಲ್ಲಿ  ಸರ್ಕಾರಗಳಿಗೆ ಪರೋಕ್ಷವಾಗಿ ಸಹಾಯ ಮಾಡಲು ಮುಂದಾದವು. ಕಳೆದ ಹತ್ತು ವರ್ಷಗಳಲ್ಲಿ  ಸರ್ಕಾರಗಳು ಕೈಗೊಂಡ ಯೋಜನೆಗಳು ಕೇವಲ ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಪರವಾಗಿ ನಿಂತಿವೆ ಹೊರತು ಜನಸಾಮಾನ್ಯರಿಗೆ ಕಿಂಚಿತ್ತು ಲಾಭದಾಯಕವಾಗಿ ಫಲಿಸಲಿಲ್ಲ ಎನ್ನುವುದು ಸಾಮಾನ್ಯ ಜನರ ಮೌನದ ಪ್ರತ್ಯುತ್ತರವಾಗಿದೆ.

ಸಾರ್ವಜನಿಕರು ಇನ್ನಾದರೂ ಎಚ್ಚೆತ್ತುಕೊಳ್ಳೋಣ, ಅಭಿವೃದ್ಧಿಯ ಮುಖವಾಡದಲ್ಲಿ, ವಿಮೆಗಳ ಭದ್ರತೆಯಲ್ಲಿ, ಉದ್ಯೋಗ ಸೃಷ್ಟಿಯ ನೆಪದಲ್ಲಿ ರೈತರ ಸಾಲಮನ್ನದ ಹೇಳಿಕೆಯಲ್ಲಿಯೇ, ದೊಡ್ಡ ದೊಡ್ಡ ಬಂಡವಾಳಗಾರರ ಬಹುಕೋಟಿ ಸಾಲವನ್ನು ಮನ್ನ ಮಾಡುವ ಮೂಲಕ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಸಣ್ಣ ಪುಟ್ಟ ವಾಹನಗಳ ಮೇಲೆ ರಸ್ತೆ ತೆರಿಗೆ, ವಾಹನಗಳ ಮೇಲಿನ ಟೋಲ್ ಸುಂಕ, ವಾಹನಗಳ ವಿಮೆ, ಮೂರನೇ ವ್ಯಕ್ತಿಗಳ ವಿಮೆ, ಎಲ್ಲವೂ ಒಂದು ರೀತಿಯ ಮಾನವನ ಬದುಕಿಗೆ ಅಂಟಿರುವ ಬಿಪಿ, ಶುಗರ್, ಮತ್ತು ವಾಸಿಯಾಗದ ಕ್ಯಾನ್ಸರ್ ಕಾಯಿಲೆಗಳಾಗಿವೆ. ಇಂತಹ ಅರಾಜಕತೆಗಳನ್ನು ತಡೆಯಬೇಕೆಂದರೆ ಜನಪರ ಆಡಳಿತ ಸರ್ಕಾರಗಳ ಆಯ್ಕೆಯಲ್ಲಿ ಮತದಾರರು ಜಾಗೃತಿಯನ್ನು ಪಡೆದುಕೊಳ್ಳಬೇಕು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ