ಶಬರಿಮಲೆ ಅಯ್ಯಪ್ಪ ಸ್ವಾಮಿಯ ಚಿನ್ನ ಕಳವು ಪ್ರಕರಣ: ಉಣ್ಣಿಕೃಷ್ಣನ್ ಪೋಟಿ ಅರೆಸ್ಟ್ - Mahanayaka

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಚಿನ್ನ ಕಳವು ಪ್ರಕರಣ: ಉಣ್ಣಿಕೃಷ್ಣನ್ ಪೋಟಿ ಅರೆಸ್ಟ್

ayyappa swamy
17/10/2025

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸ್ವರ್ಣ ಲೇಪಿತ ತಾಮ್ರದ ದ್ವಾರಪಾಲಕರ ಮೂರ್ತಿಗಳಲ್ಲಿನ ಬಂಗಾರದ ತೂಕದಲ್ಲಿ ಕಡಿಮೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿಯನ್ನು ವಿಶೇಷ ತನಿಖಾ ತಂಡದ (ಎಸ್‌ ಐಟಿ) ಅಧಿಕಾರಿಗಳು ಇಂದು (ಶುಕ್ರವಾರ) ಬಂಧಿಸಿದ್ದಾರೆ.

ಗುರುವಾರದಂದು ಬೆಂಗಳೂರು ಮೂಲದ ಉದ್ಯಮಿ ಉಣ್ಣಿಕೃಷ್ಣನ್ ಪೋಟಿಯನ್ನು ವಶಕ್ಕೆ ಪಡೆದಿದ್ದ ಎಸ್‌ ಐಟಿ, ತಿರುವನಂತಪುರದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಚಾರಣೆಯ ಬಳಿಕ ಎಸ್‌ಐಟಿ ಅಧಿಕಾರಿಗಳು ಉಣ್ಣಿಕೃಷ್ಣನ್ ಪೋಟಿಯನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಂದು ಮಧ್ಯಾಹ್ನದ ವೇಳೆ ಪೋಟಿಯನ್ನು ಪತ್ತನಂತಿಟ್ಟದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ವೇಳೆ ಪೋಟಿಯನ್ನು ಕಸ್ಟಡಿಗೆ ಒಪ್ಪಿಸುವಂತೆ ಎಸ್‌ ಐಟಿ ಕೋರಲಿದೆ.  ಕೇರಳ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಎಸ್‌ಐಟಿ ಎರಡು ಪ್ರಕರಣಗಳ ತನಿಖೆ ನಡೆಸುತ್ತಿದೆ. ದ್ವಾರಪಾಲಕ ಮೂರ್ತಿಗಳಲ್ಲಿ ಚಿನ್ನ ಕಳವು ಜೊತೆಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಚೌಕಟ್ಟಿನಲ್ಲಿದ್ದ ಚಿನ್ನವೂ ಕಾಣೆಯಾದ ಕುರಿತು ಎಸ್‌ ಐಟಿ ತನಿಖೆ ನಡೆಸುತ್ತಿದೆ.

ಈ ಹಿಂದೆ ಪೋಟಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿಯವರು (ಟಿಡಿಬಿ) ಎರಡು ದಿನ ವಿಚಾರಣೆ ನಡೆಸಿದ್ದರು. ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ಕೇರಳ ಹೈಕೋರ್ಟ್ ಆರು ವಾರಗಳ ಗಡುವು ನೀಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ