ಅತ್ಯಾಚಾರ, ವಂಚನೆ ಪ್ರಕರಣ: ಓಡಿ ಹೋಗಿದ್ದ ಬಿಜೆಪಿ ಮುಖಂಡನ ಪುತ್ರ ಮೈಸೂರಿನ ಬಳಿ ಬಂಧನ - Mahanayaka

ಅತ್ಯಾಚಾರ, ವಂಚನೆ ಪ್ರಕರಣ: ಓಡಿ ಹೋಗಿದ್ದ ಬಿಜೆಪಿ ಮುಖಂಡನ ಪುತ್ರ ಮೈಸೂರಿನ ಬಳಿ ಬಂಧನ

krishna j rao
05/07/2025

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಅಮಾಯಕ ಯುವತಿಯ ಮೇಲೆ ಬಲವಂತದ ಲೈಂಗಿಕ ಸಂಪರ್ಕ ನಡೆಸಿ ಆಕೆಯನ್ನು ಗರ್ಭಾವತಿಯನ್ನಾಗಿಸಿ ಬಳಿಕ ಮದುವೆಗೆ ನಿರಾಕರಿಸಿ ಪರಾರಿಯಾಗಿದ್ದ  ಪ್ರಕರಣದ ಆರೋಪಿ, ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ. ರಾವ್(Srikrishna J. Rao) ಮೈಸೂರಿನ ಸಮೀಪ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಹೈಸ್ಕೂಲ್ ನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಶ್ರೀಕೃಷ್ಣ ಜೆ. ರಾವ್ ನ ಸಹಪಾಠಿಯಾಗಿದ್ದ ನೊಂದ ಯುವತಿ, ಪ್ರಸ್ತುತ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ಶ್ರೀಕೃಷ್ಣ ಜೆ. ರಾವ್ ಯುವತಿಯನ್ನು ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕರೆಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಾವತಿಯನ್ನಾಗಿದ್ದ. ಇತ್ತೀಚೆಗೆ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಮದುವೆಯಾಗುವುದಾಗಿ ನೊಂದ ಯುವತಿಗೆ ಭರವಸೆ ನೀಡಿದ್ದ ಶ್ರೀಕೃಷ್ಣ ಜೆ. ರಾವ್ ಇದೀಗ ಮದುವೆಗೆ ನಿರಾಕರಿಸಿ ವಂಚಿಸಿದ್ದಾನೆ ಎಂದು ಸಂತ್ರಸ್ತೆ ಆತನ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜೂ.11ಕ್ಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ವೇಳೆ ಆರೋಪಿ ಶ್ರೀಕೃಷ್ಣ ಜೆ.ರಾವ್ ತಂದೆ ಪಿ.ಜಿ.ಜಗನ್ನಿವಾಸ ರಾವ್ ಅವರು, ಪುತ್ರನಿಗೆ ಜೂ.23ಕ್ಕೆ 21 ವರ್ಷ ತುಂಬಿದ ಬಳಿಕ ವಿವಾಹ ಮಾಡಿಕೊಡುವುದಾಗಿ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು.  ಒಂದು ವೇಳೆ ಮಗ ವಿವಾಹಕ್ಕೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದೆಂದೂ ತಿಳಿಸಿದ್ದರು. ಆದರೆ ಆರೋಪಿ ಶ್ರೀಕೃಷ್ಣ ಜೆ. ರಾವ್ ಗೆ ಜೂ.23ಕ್ಕೆ 21 ವರ್ಷ ತುಂಬಿದ ಬಳಿಕ ಆರೋಪಿಯು ಸಂತ್ರಸ್ತೆಯನ್ನು ವಿವಾಹವಾಗಲು ಒಪ್ಪದ ಹಿನ್ನೆಲೆಯಲ್ಲಿ ಜು.24ರಂದು ಸಂತ್ರಸ್ತ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನ್ನ ವಿರುದ್ಧ ದೂರು ದಾಖಲಾಗುತ್ತಲೇ ಆರೋಪಿ ಶ್ರೀಕೃಷ್ಣ ಜೆ.ರಾವ್ ನಾಪತ್ತೆಯಾಗಿದ್ದ. ಇದೀಗ ಆರೋಪಿ ಶ್ರೀಕೃಷ್ಣ ಜೆ. ರಾವ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನಿಂದ ತೆರಳಿರುವ ಪೊಲೀಸರ ತಂಡವೊಂದು ಮೈಸೂರು ಸಮೀಪ ಆರೋಪಿ ಇರುವುದನ್ನು ಪತ್ತೆ ಮಾಡಿ ಅಲ್ಲಿಂದ ವಶಕ್ಕೆ ಪಡೆದುಕೊಂಡು ಪುತ್ತೂರಿಗೆ ಕರೆ ತಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ