ಚಾರ್ಮಾಡಿಘಾಟ್ ಗೆ ನೂತನ ನಿಯಮ: ರಾತ್ರಿ ವೇಳೆ ಐದು ವಾಹನಗಳಿದ್ದಾಗ ಮಾತ್ರ ಎಂಟ್ರಿ!

ಕೊಟ್ಟಿಗೆಹಾರ: ಕಾಫಿನಾಡು–ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ದಾರಿ ಚಾರ್ಮಾಡಿ ಘಾಟ್‌ನಲ್ಲಿ ಇದೀಗ ಹೊಸ ನಿಯಮ ಜಾರಿಗೆ ಬಂದಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಇನ್ನು ಮುಂದೆ ಒಂದೆರಡು ವಾಹನಗಳಿಗಲ್ಲ, ಕನಿಷ್ಠ ಐದು ವಾಹನಗಳು ಸೇರಿದ್ದಾಗ ಮಾತ್ರ ಎಂಟ್ರಿ ಸಿಗಲಿದೆ.
ರಾತ್ರಿ ವೇಳೆ ಚೆಕ್ ಪೋಸ್ಟ್ ದಾಟುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ, ಐದು ವಾಹನಗಳು ಒಟ್ಟಾಗಿ ಹೊರಡುವಂತೆ ವ್ಯವಸ್ಥೆ ರೂಪಿಸಲಾಗಿದೆ.
ಯಾಕೆ ಈ ಹೊಸ ವ್ಯವಸ್ಥೆ?
ದಟ್ಟ ಅರಣ್ಯದಿಂದ ಸುತ್ತುವರಿದ ಈ ಘಾಟ್ ನಲ್ಲಿ ರಾತ್ರಿ ವೇಳೆ ಗೋ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರುಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ಈಗಿರುವ ಬ್ಯಾರಿಕೇಡ್ ಬದಲಾಗಿ ಹೊಸ ಭೂಮ್ ಬ್ಯಾರಿಯರ್ ನಿರ್ಮಿಸಲಾಗುತ್ತಿದೆ. ರಾತ್ರಿ ವೇಳೆ ಒಬ್ಬ ಪಿಎಸೈ ನೇತೃತ್ವದಲ್ಲಿ ಪೊಲೀಸರು ಕಾವಲು ನಿಲ್ಲಲಿದ್ದಾರೆ. ಜೊತೆಗೆ ಚೆಕ್ ಪೋಸ್ಟ್‌ನಿಂದ ಒಂದೂವರೆ ಕಿಮೀ ದೂರದಲ್ಲಿರುವ ಕಚ್ಚಾ ರಸ್ತೆಯನ್ನು ಗೋ ಕಳ್ಳರು ದುರುಪಯೋಗ ಮಾಡುತ್ತಿದ್ದರೆಂಬ ದೂರು ಹಿನ್ನೆಲೆಯಲ್ಲಿ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಆ ರಸ್ತೆಯಲ್ಲಿ ಗೇಟ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಗೇಟ್ ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಮುಚ್ಚಿರಲಿದೆ.
— ವಿಕ್ರಂ ಅಮಟೆ, ಎಸ್ಪಿ ಚಿಕ್ಕಮಗಳೂರು
ಇನ್ನುಮುಂದೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕ ಹಾದು ಹೋಗುವ ಎಲ್ಲಾ ವಾಹನಗಳ ವಿವರಗಳು ಸಿಸಿಟಿವಿಯಲ್ಲಿ ದಾಖಲಾಗಲಿದ್ದು, ಪೊಲೀಸರ ದಾಖಲೆ ಪುಸ್ತಕದಲ್ಲೂ ಬರೆಯಲಾಗುತ್ತದೆ. ಒಟ್ಟಾರೆ, ಚಾರ್ಮಾಡಿ ಘಾಟ್‌ನಲ್ಲಿ ಗೋ ಕಳ್ಳತನ ಹಾಗೂ ಇತರ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಎಸ್ಪಿ ವಿಕ್ರಂ ಅಮಟೆ ರೂಪಿಸಿರುವ ಈ ಮಾಸ್ಟರ್ ಪ್ಲಾನ್ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD