ದೇವನಹಳ್ಳಿಯಲ್ಲಿ ಭೀಕರ ಅಪಘಾತ: ವೀಕೆಂಡ್ ಲಾಂಗ್ ಡ್ರೈವ್ ಹೊರಟಿದ್ದ ಮೂವರು ಸ್ನೇಹಿತರ ದುರ್ಮರಣ
ದೇವನಹಳ್ಳಿ: ವೀಕೆಂಡ್ ಹಿನ್ನೆಲೆಯಲ್ಲಿ ಬೈಕ್ ಏರಿ ಲಾಂಗ್ ಡ್ರೈವ್ ಹೊರಟಿದ್ದ ಮೂವರು ಯುವಕರು ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಗಲಕೋಟೆ ಬಳಿ ನಡೆದಿದೆ.
ಘಟನೆಯ ವಿವರ: ಮೃತರನ್ನು ತೌಸೀಪ್, ಶ್ರೀನಿವಾಸ್ ಮತ್ತು ಮಣಿಕಂಠ ಎಂದು ಗುರುತಿಸಲಾಗಿದೆ. ಇವರು ಯಲಹಂಕದ ಹುಣಸಮಾರನಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಾಗಿದ್ದರು. ಶನಿವಾರ ಬೆಳಗ್ಗೆ ವೀಕೆಂಡ್ ಸಂಭ್ರಮಕ್ಕಾಗಿ ಒಂದೇ ಬೈಕ್ನಲ್ಲಿ ಹೊಸಕೋಟೆಯ ಕಂಬಳಿಪುರದ ಕಾಟೇರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ವಾಪಸ್ ಯಲಹಂಕದತ್ತ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ದೇವನಹಳ್ಳಿ ಹೊರವಲಯದ ಬೂದಿಗೆರೆ ರಸ್ತೆಯ ಅಗಲಕೋಟೆ ಬಳಿ ಬೈಕ್ ಸವಾರ ಅತಿ ವೇಗವಾಗಿ ಚಲಿಸುತ್ತಿದ್ದರಿಂದ ನಿಯಂತ್ರಣ ಕಳೆದುಕೊಂಡು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಹಾರಿದೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಗೆ ಬೈಕ್ ನೇರವಾಗಿ ಡಿಕ್ಕಿ ಹೊಡೆದಿದೆ.
ದುರಂತ ಅಂತ್ಯ: ಅಪಘಾತದ ರಭಸಕ್ಕೆ ಮೂವರೂ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯುವಕರು ಹೆಲ್ಮೆಟ್ ಧರಿಸದ ಕಾರಣ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಪ್ರಾಣಾಪಾಯ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತದ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಲು ಅತ್ಯಂತ ಭಯಾನಕವಾಗಿದೆ.
ಸಾರ್ವಜನಿಕರ ಆಕ್ರೋಶ: ಘಟನೆ ನಡೆದ ಸುಮಾರು ಒಂದು ಗಂಟೆಯವರೆಗೆ ಆಂಬುಲೆನ್ಸ್ ಸ್ಥಳಕ್ಕೆ ಬಾರದ ಕಾರಣ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇವನಹಳ್ಳಿ-ಬೂದಿಗೆರೆ ರಸ್ತೆಯ ತಿರುವುಗಳಲ್ಲಿ ಸ್ಪೀಡ್ ಬ್ರೇಕರ್ ಇಲ್ಲದಿರುವುದು ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ದೇವನಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ನಂತರ ಪರಾರಿಯಾಗಿರುವ ಟಿಪ್ಪರ್ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























