ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉದ್ಧಟತನ: ಕಾಡಾನೆಗೆ ಬೆದರಿಸಿ ಅಕ್ರಮ ಸಫಾರಿ ನಡೆಸಿದ ಯುವಕರು! - Mahanayaka

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉದ್ಧಟತನ: ಕಾಡಾನೆಗೆ ಬೆದರಿಸಿ ಅಕ್ರಮ ಸಫಾರಿ ನಡೆಸಿದ ಯುವಕರು!

chikkamagaluru
02/06/2026

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ (ಲಕ್ಕವಳ್ಳಿ ಸಮೀಪ) ಯುವಕರ ಗುಂಪೊಂದು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಸಫಾರಿ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ತೆರೆದ (ಓಪನ್) ಜೀಪಿನಲ್ಲಿ ಅರಣ್ಯದ ಅತ್ಯಂತ ಸೂಕ್ಷ್ಮ ಪ್ರದೇಶವಾದ ‘ಕೋರ್ ಝೋನ್’ ಪ್ರವೇಶಿಸಿದ ಯುವಕರು, ವನ್ಯಜೀವಿಗಳಿಗೆ ತೊಂದರೆ ಕೊಟ್ಟು ಹುಚ್ಚಾಟ ಮೆರೆದಿದ್ದಾರೆ.

ಯುವಕರ ತಂಡವು ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಆನೆಗಳ ತೀರಾ ಸಮೀಪಕ್ಕೆ ತೆರಳಿ, ಕೂಗಾಟ–ಕಿರುಚಾಟ ನಡೆಸಿ ಅವುಗಳನ್ನು ಬೆದರಿಸಲು ಯತ್ನಿಸಿದೆ. ಯುವಕರ ಈ ಉದ್ಧಟತನದಿಂದ ಆಕ್ರೋಶಗೊಂಡ ಕಾಡಾನೆಯೊಂದು ಇವರ ಓಪನ್ ಜೀಪನ್ನು ರೋಷದಿಂದ ಅಟ್ಟಿಸಿಕೊಂಡು ಬಂದಿದೆ. ಜೀಪನ್ನು ಆನೆ ಅಟ್ಟಿಸಿಕೊಂಡು ಬರುತ್ತಿದ್ದರೂ ಸಹ ಯುವಕರು ಭಯವಿಲ್ಲದೆ ರೀಲ್ಸ್ ಚಿತ್ರೀಕರಣ ಹಾಗೂ ಮೋಜು-ಮಸ್ತಿ ಮುಂದುವರಿಸಿದ್ದಾರೆ. ಸದ್ಯ ಈ ಹುಚ್ಚಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.

ಹೆಬ್ಬೆ ವಲಯದ ಅತ್ಯಂತ ಸುರಕ್ಷಿತ ವಲಯಕ್ಕೆ ಖಾಸಗಿ ವಾಹನಕ್ಕೆ ಪ್ರವೇಶ ಸಿಕ್ಕಿದ್ದು ಹೇಗೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಯುವಕರು ತಮ್ಮ ರಾಜಕೀಯ ಪ್ರಭಾವ ಬಳಸಿ ಅರಣ್ಯದೊಳಗೆ ಅಕ್ರಮವಾಗಿ ನುಗ್ಗಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆಯ ಕಣ್ಣೆದುರೇ ಇಂತಹ ಘಟನೆ ನಡೆದಿರುವುದು ಇಲಾಖೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಪರಿಸರವಾದಿಗಳ ಆಗ್ರಹ: “ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಯುವಕರ ಈ ಬೇಜವಾಬ್ದಾರಿತನದಿಂದ ಅವರ ಜೀವಕ್ಕೂ ಅಪಾಯವಿತ್ತು, ಜೊತೆಗೆ ಮೂಕ ಪ್ರಾಣಿಗಳಿಗೂ ತೊಂದರೆಯಾಗಿದೆ. ತಕ್ಷಣವೇ ಅಕ್ರಮ ಸಫಾರಿಗೆ ಬಳಸಿದ ಜೀಪನ್ನು ಸೀಜ್ ಮಾಡಬೇಕು ಮತ್ತು ಈ ಯುವಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.”

ಈ ಘಟನೆಯು ಭದ್ರಾ ಟೈಗರ್ ರಿಸರ್ವ್‌ನ ಭದ್ರತೆ ಮತ್ತು ಕಾವಲು ವ್ಯವಸ್ಥೆಯ ಮೇಲಿರುವ ನಂಬಿಕೆಗೆ ದೊಡ್ಡ ಧಕ್ಕೆ ತಂದಿದ್ದು, ಉನ್ನತ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥ ಅರಣ್ಯ ಸಿಬ್ಬಂದಿ ಹಾಗೂ ಯುವಕರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ