ಬೆಂಗಳೂರಿನಲ್ಲಿ ಬರ್ಬರ ಕೃತ್ಯ: ನಿಶ್ಚಿತಾರ್ಥವಾಗಿದ್ದ ಅಪ್ರಾಪ್ತೆಯ ಎದೆ ಸೀಳಿ, ಗುಪ್ತಾಂಗಕ್ಕೆ ಇರಿದು ಕೊಂದ ಪಾಪಿ!
ಬೆಂಗಳೂರು: ಸಿಲಿಕಾನ್ ಸಿಟಿಯ ಡಿಜೆ ಹಳ್ಳಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ತನ್ನನ್ನು ಮದುವೆಯಾಗಬೇಕಿದ್ದ ಅಪ್ರಾಪ್ತ ಬಾಲಕಿಯನ್ನೇ ಆಕೆಯ ಭಾವಿ ಪತಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಹಾಗೂ ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಶಬೀಲ್ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಷಯ ತಿಳಿದ ಪೋಷಕರು, 2025ರ ಜೂನ್ ತಿಂಗಳಿನಲ್ಲಿ ಇವರಿಬ್ಬರಿಗೂ ನಿಶ್ಚಿತಾರ್ಥ (Engagement) ಮಾಡಿಸಿದ್ದರು. ಮುಂದಿನ ದಿನಗಳಲ್ಲಿ ಇವರಿಬ್ಬರ ಮದುವೆ ನಡೆಯಬೇಕಿತ್ತು.
ನಿಶ್ಚಿತಾರ್ಥವಾದ ನಂತರ ಸೈಯದ್ ಗೆ ತನ್ನ ಭಾವಿ ಪತ್ನಿಯ ಮೇಲೆ ಅನುಮಾನ ಮೂಡತೊಡಗಿದೆ. ಇದೇ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಘಟನೆಯ ದಿನ ಡಿಜೆ ಹಳ್ಳಿ ಸಮೀಪದ ‘ಸಕ್ಕರೆ ಮಂಡಿ’ ಎಂಬಲ್ಲಿರುವ ಸಂಬಂಧಿಕರ ಪಾಳುಬಿದ್ದ ಜಾಗಕ್ಕೆ ಬಾಲಕಿಯನ್ನು ಕರೆಸಿಕೊಂಡಿದ್ದಾನೆ. ಬಾಲಕಿ ತನ್ನ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಆತನನ್ನು ಭೇಟಿಯಾಗಲು ಹೋಗಿದ್ದಳು. ಆದರೆ ಹೊರಗೆ ಹೋಗಿದ್ದ ಬಾಲಕಿ ಮತ್ತೆ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಇಬ್ಬರೂ ಭೇಟಿಯಾಗುತ್ತಿದ್ದ ಪಾಳುಬಿದ್ದ ಜಾಗಕ್ಕೆ ಹೋಗಿ ನೋಡಿದಾಗ ಬಾಲಕಿಯ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿ ಸೈಯದ್ ತನ್ನ ಭಾವಿ ಪತ್ನಿಯ ಎದೆ ಭಾಗವನ್ನು ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿದ್ದಾನೆ. ಅಷ್ಟೇ ಅಲ್ಲದೆ, ದೇಹದಾದ್ಯಂತ ಸುಮಾರು 17 ಬಾರಿ ಚಾಕುವಿನಿಂದ ಚುಚ್ಚಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದಾನೆ ಅಂತಾ ವರದಿಗಳಿಂದ ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿದ ನಂತರ ಆರೋಪಿ ಸೈಯದ್ ಶಬೀಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಸಂಶಯದ ಹಿನ್ನೆಲೆಯಲ್ಲಿ ನಡೆದ ಈ ಭೀಕರ ಹತ್ಯೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























