ಶೀಘ್ರದಲ್ಲೇ ಸಾರಿಗೆ ಬಸ್ ಟಿಕೆಟ್ ದರ ಏರಿಕೆ? ಶೇ 25 ರಷ್ಟು ಹೆಚ್ಚಳಕ್ಕೆ ಸಿಎಂಗೆ ನಾಲ್ಕೂ ನಿಗಮಗಳ ಮನವಿ!
ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ ಸರಿಸುಮಾರು 8 ರೂಪಾಯಿಗಳಷ್ಟು ದುಬಾರಿಯಾಗಿದ್ದು, ಇದರ ನೇರ ಹೊರೆ ರಾಜ್ಯದ ಸಾರಿಗೆ ಸಂಸ್ಥೆಗಳ ಮೇಲೆ ಬಿದ್ದಿದೆ. ತೀವ್ರ ಆರ್ಥಿಕ ನಷ್ಟದಿಂದ ತತ್ತರಿಸುತ್ತಿರುವ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ವಾಯವ್ಯ (NWKRTC) ಹಾಗೂ ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳು ಬಸ್ ಟಿಕೆಟ್ ದರವನ್ನು ಕನಿಷ್ಠ ಶೇಕಡಾ 25 ರಷ್ಟು ಹೆಚ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕೃತವಾಗಿ ಮನವಿ ಮಾಡಿವೆ.
ಇಂಧನ ಬೆಲೆ ಹೆಚ್ಚಳದಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಬರೋಬ್ಬರಿ 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಹೀಗೆಯೇ ಮುಂದುವರಿದರೆ ವಾರ್ಷಿಕವಾಗಿ ಸುಮಾರು 480 ಕೋಟಿ ರೂ. ನಷ್ಟವಾಗುವ ಭೀತಿ ಎದುರಾಗಿದೆ.
ಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇಕಡಾ 12.5 ರಷ್ಟು ಹೊಸ ವೇತನ ನೀಡಬೇಕಿದೆ. ಜೊತೆಗೆ ನೌಕರರ ಒಟ್ಟು 1,271 ಕೋಟಿ ರೂ. ವೇತನ ಹಿಂಬಾಕಿಯಲ್ಲಿ (Arrears) ಇನ್ನು 821 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾದ ಜವಾಬ್ದಾರಿ ನಿಗಮಗಳ ಮೇಲಿದೆ.
ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಗೆ ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು 5,000 ಕೋಟಿ ರೂಪಾಯಿಗಳ ಅನುದಾನವೂ ಬಾಕಿ ಉಳಿದಿದೆ ಎನ್ನಲಾಗಿದೆ.
ಕಳೆದ ವರ್ಷವಷ್ಟೇ (ಜನವರಿಯಲ್ಲಿ) ಶೇಕಡಾ 15 ರಷ್ಟು ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಕೇವಲ ಒಂದು ವರ್ಷದ ಅವಧಿಯಲ್ಲಿ ಶೇ. 25ರಷ್ಟು ದರ ಏರಿಕೆಗೆ ಸಿದ್ಧತೆ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
“ಎಲ್ಲಾ ಟಿಕೆಟ್ ದರಗಳನ್ನು ಸಂಪೂರ್ಣವಾಗಿ ಹೆಚ್ಚಿಸುವ ಬದಲು, ಸದ್ಯ ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರಿಂದ ಕನಿಷ್ಠ ಅರ್ಧದಷ್ಟಾದರೂ (ಶೇ.50) ಟಿಕೆಟ್ ದರವನ್ನು ಪಡೆದುಕೊಳ್ಳಲಿ. ಇದರಿಂದ ಸಾರ್ವಜನಿಕರಿಗೂ ಹೊರೆಯಾಗುವುದಿಲ್ಲ ಮತ್ತು ನಿಗಮಗಳ ಆರ್ಥಿಕ ಸಂಕಷ್ಟವೂ ತಪ್ಪುತ್ತದೆ” ಎಂದು ಕೆಲವು ಪ್ರಯಾಣಿಕರು ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. ಸದ್ಯ ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ ಎಂಬ ವಾದ ಕೇಳಿಬರುತ್ತಿದ್ದು, ಮುಖ್ಯಮಂತ್ರಿಗಳು ಈ ಪ್ರಸ್ತಾವನೆಗೆ ಹಸಿರು ನಿಶಾನೆ ನೀಡುತ್ತಾರಾ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























