ಗ್ರಾಹಕರಿಗೆ ವಾರಂಟಿ ನಿರಾಕರಣೆ: ಸ್ಯಾಮ್ ಸಂಗ್ ಸಂಸ್ಥೆಗೆ ಭಾರಿ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ! - Mahanayaka

ಗ್ರಾಹಕರಿಗೆ ವಾರಂಟಿ ನಿರಾಕರಣೆ: ಸ್ಯಾಮ್ ಸಂಗ್ ಸಂಸ್ಥೆಗೆ ಭಾರಿ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ!

samsung.jpg
22/06/2026

ಮೊಬೈಲ್ ಮೇಲಿರುವ ಸಣ್ಣಪುಟ್ಟ ಗೀರುಗಳ (Scratches) ನೆಪವೊಡ್ಡಿ ಗ್ರಾಹಕರಿಗೆ ವಾರಂಟಿ ನಿರಾಕರಿಸಿದ್ದ ಪ್ರಸಿದ್ಧ ಮೊಬೈಲ್ ತಯಾರಿಕಾ ಸಂಸ್ಥೆ ‘ಸ್ಯಾಮ್ಸಂಗ್’ಗೆ ಪಂಜಾಬ್ ನ ಗ್ರಾಹಕರ ನ್ಯಾಯಾಲಯವೊಂದು ಬಿಸಿ ಮುಟ್ಟಿಸಿದೆ. ಗ್ರಾಹಕರೊಬ್ಬರ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆಡ್ ಫ್ಲಿಪ್ 4 (Samsung Galaxy Z Flip 4) ಫೋನ್ ಅನ್ನು ಉಚಿತವಾಗಿ ರಿಪೇರಿ ಮಾಡಿಕೊಡಬೇಕು, ಇಲ್ಲವೇ ಒಟ್ಟು 1.1 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ.

ದೂರುದಾರರು ಆಗಸ್ಟ್ 30, 2022 ರಂದು 90,000 ರೂ. ನೀಡಿ ಸ್ಯಾಮ್ ಸಂಗ್ ಜೆಡ್ ಫ್ಲಿಪ್ 4 ಫೋನ್ ಖರೀದಿಸಿದ್ದರು. ಆದರೆ ವಾರಂಟಿ ಅವಧಿ ಮುಗಿಯುವ ಕೆಲವೇ ದಿನಗಳ ಮುನ್ನ, ಅಂದರೆ ಆಗಸ್ಟ್ 5, 2023 ರಂದು ಈ ಪ್ರೀಮಿಯಂ ಫೋನ್ ನ ಸೆನ್ಸರ್ ಮತ್ತು ಸ್ಪೀಕರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಗ್ರಾಹಕರು ಫೋನ್ ಅನ್ನು ಅಧಿಕೃತ ಸರ್ವಿಸ್ ಸೆಂಟರ್ ಗೆ ನೀಡಿದಾಗ, ಮೊಬೈಲ್ ಸ್ಕ್ರೀನ್ ಹಾಗೂ ಹಿಂಭಾಗದಲ್ಲಿ ಸಣ್ಣಪುಟ್ಟ ಗೀರುಗಳಿರುವುದನ್ನು ಕಾರಣವಾಗಿಟ್ಟುಕೊಂಡು ಕಂಪನಿಯು “ಇದು ನಿಮ್ಮ ನಿರ್ಲಕ್ಷ್ಯದಿಂದ ಆಗಿರುವ ಭೌತಿಕ ಹಾನಿ” ಎಂದು ಹೇಳಿ ವಾರಂಟಿ ಅಡಿಯಲ್ಲಿ ಉಚಿತವಾಗಿ ರಿಪೇರಿ ಮಾಡಲು ನಿರಾಕರಿಸಿತ್ತು.

ಗ್ರಾಹಕರು ಕಂಪನಿಯ ಟೋಲ್ ಫ್ರೀ ನಂಬರ್ ಹಾಗೂ ಇಮೇಲ್ ಮೂಲಕ ಮೇಲಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗದಿದ್ದಾಗ, ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ಪಂಜಾಬ್ನ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗವು, ಸ್ಯಾಮ್ ಸಂಗ್ ಕಂಪನಿಯ ಈ ಧೋರಣೆಯನ್ನು “ಸೇವೆಯಲ್ಲಿನ ಗಂಭೀರ ನ್ಯೂನತೆ” (Deficiency in Service) ಎಂದು ಪರಿಗಣಿಸಿದೆ. ಕೇವಲ ಸಣ್ಣಪುಟ್ಟ ಗೀರುಗಳ ಕಾರಣ ನೀಡಿ ತಾಂತ್ರಿಕ ದೋಷವಿರುವ ಫೋನ್ಗೆ ವಾರಂಟಿ ನಿರಾಕರಿಸುವುದು ತಪ್ಪು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಕಂಪನಿಯು ಒಂದು ತಿಂಗಳ ಒಳಗಾಗಿ ಗ್ರಾಹಕರ ಫೋನ್ ಅನ್ನು ವಾರಂಟಿ ಅಡಿಯಲ್ಲೇ ಸಂಪೂರ್ಣ ಉಚಿತವಾಗಿ ರಿಪೇರಿ ಮಾಡಿಕೊಡಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ರಿಪೇರಿ ಮಾಡಲು ವಿಫಲವಾದರೆ, ಫೋನ್ ನ ಮೂಲ ಬೆಲೆ 90,000 ರೂಪಾಯಿಗಳನ್ನು ಶೇ. 5 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಗ್ರಾಹಕರಿಗೆ ಹಿಂತಿರುಗಿಸಬೇಕು ಅಂತ ಆದೇಶಿಸಿದೆ.
ಇನ್ನೂ ಗ್ರಾಹಕರು ಅನುಭವಿಸಿದ ಮಾನಸಿಕ ತೊಂದರೆ ಮತ್ತು ಅಲೆದಾಟಕ್ಕೆ ಪ್ರತಿಯಾಗಿ ಕಂಪನಿಯು 20,000 ರೂಪಾಯಿ ಹೆಚ್ಚುವರಿ ದಂಡ/ಪರಿಹಾರವನ್ನು ಪಾವತಿಸಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಕಂಪನಿಗಳು ಆಕರ್ಷಕ ಜಾಹೀರಾತು ನೀಡಿ ಉತ್ಪನ್ನಗಳನ್ನು ಮಾರಾಟ ಮಾಡಿದ ನಂತರ, ಸಣ್ಣಪುಟ್ಟ ಕಾರಣಗಳನ್ನು ನೀಡಿ ವಾರಂಟಿ ನೀಡಲು ಸತಾಯಿಸುವಂತಿಲ್ಲ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿದೆ. ಒಂದು ವೇಳೆ ನಿಮಗೂ ಇಂತಹ ಅನುಭವವಾದರೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline) ಸಂಖ್ಯೆ 1915 ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ