ಅಪಘಾತಕ್ಕೀಡಾದ ಕಾರಿನ ವೇಗ ಕಂಡು ಬೆಚ್ಚಿಬಿದ್ದ ಪೊಲೀಸರು: ಜೊತೆಗಿದ್ದವರು ಹೋದರು, ವೇಗವಾಗಿ ಚಲಾಯಿಸಿದ ಚಾಲಕ ಬದುಕುಳಿದ!
ಮುಂಬೈ: ಭಾನುವಾರ ಮುಂಜಾನೆ ಪನ್ವೇಲ್–ವಡೋದರಾ ಹೆದ್ದಾರಿಯ ಬದ್ಲಾಪುರ ಸಮೀಪ ನಡೆದ ಭೀಕರ ಬಿಎಂಡಬ್ಲ್ಯು ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು.
ಅಪಘಾತದ ಸಮಯದಲ್ಲಿ ಕಾರಿನ ವೇಗ 251 ಕಿಮೀ ಇತ್ತು ಎಂಬುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಥಾಣೆ ಪೊಲೀಸರು ಈ ವಿಡಿಯೋ ಅಪಘಾತದ ಕೆಲವೇ ಕ್ಷಣಗಳ ಮುನ್ನದ್ದಾಗಿದೆ ಎಂದು ದೃಢಪಡಿಸಿದ್ದಾರೆ.
ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಅಂಗದ್ ಗಿಲ್ (26) ಎಂಬಾತನೇ ಕಾರನ್ನು ಚಲಾಯಿಸುತ್ತಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಭಾನುವಾರ ಮುಂಜಾನೆ ಸುಮಾರು 2:39 ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಫುಟ್ಬಾಲ್ ಆಟಗಾರ ಯೋಗೇಶ್ ನೇಗಿ ಅವರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಅಂಗದ್ ಗಿಲ್, ಯೋಗೇಶ್ ನೇಗಿ ಮತ್ತು ಬಾಂದ್ರಾ ನಿವಾಸಿ ರೆಬೆಕಾ ಜೇಕಬ್ (24) ಎಂಬುವರು ಕಾರಿನಲ್ಲಿ ಹಿಂತಿರುಗುತ್ತಿದ್ದರು.
ಅತಿಯಾದ ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ಗಾಳಿಯಲ್ಲಿ ಹಲವು ಬಾರಿ ಉರುಳಿ (Flipped), ರಸ್ತೆ ವಿಭಜಕಕ್ಕೆ (Divider) ಡಿಕ್ಕಿ ಹೊಡೆದಿದೆ. ಕಾರಿನ ಮೇಲ್ಛಾವಣಿ (Hood) ಓಪನ್ ಆಗಿದ್ದರಿಂದ, ಅಪಘಾತದ ತೀವ್ರತೆಗೆ ಒಳಗಿದ್ದ ಮೂವರೂ ರಸ್ತೆಗೆ ಸಿಡಿದು ಬಿದ್ದಿದ್ದಾರೆ. ಈ ಘಟನೆಯಲ್ಲಿ ಯೋಗೇಶ್ ನೇಗಿ ಮತ್ತು ರೆಬೆಕಾ ಜೇಕಬ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ಚಲಾಯಿಸುತ್ತಿದ್ದ ಅಂಗದ್ ಗಿಲ್ ವಿರುದ್ಧ ಬದ್ಲಾಪುರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆಗೆ ಸಮಾನವಲ್ಲದ ಅಪರಾಧದ ನರಹತ್ಯೆ (Culpable homicide not amounting to murder), ನಿರ್ಲಕ್ಷ್ಯ ಹಾಗೂ ಅತಿ ವೇಗದ ಚಾಲನೆ, ಅಪಾಯಕಾರಿ ಚಾಲನೆ ಮತ್ತು ಸೀಟ್ ಬೆಲ್ಟ್ ಧರಿಸದೆ ಇರುವುದು ಮೊದಲಾದ ಪ್ರಕರಣಗಳನ್ನು ಆತನ ವಿರುದ್ಧ ದಾಖಲಿಸಲಾಗಿದೆ.
“ಅಪಘಾತ ನಡೆದ ರಸ್ತೆಯು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರಲಿಲ್ಲ. ಅಲ್ಲದೆ ಅಲ್ಲಿ ಯಾವುದೇ ರಸ್ತೆ ದೀಪಗಳು (Street lamps) ಇರಲಿಲ್ಲ” ಎಂದು ಬದ್ಲಾಪುರ ಪಶ್ಚಿಮ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಕೈಲಾಶ್ ಶಿಂದೆ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























