ಪ್ರಿಯಕರನಿಗೋಸ್ಕರ ಹೆತ್ತವರನ್ನು ಮುಗಿಸಿದಳು: ಒಡ ಹುಟ್ಟಿದ ತಂಗಿಯನ್ನೂ ಬಿಡಲಿಲ್ಲ ಪಾಪಿ!
ಬೆಂಗಳೂರು: ಪ್ರಿಯಕರನೊಂದಿಗೆ ಲಿವ್–ಇನ್ ರಿಲೇಶನ್ ಶಿಪ್ ನಲ್ಲಿದ್ದ ಯುವತಿಯೊಬ್ಬಳು, ತನ್ನ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಹೆತ್ತ ತಂದೆ, ತಾಯಿ ಹಾಗೂ ತಂಗಿಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ನಡೆದಿದೆ.
ಬೆಂಗಳೂರಿನ ಸಿಗೇಹಳ್ಳಿಯಲ್ಲಿರುವ ಡಾಮಿನಿಕ್ ಲೇಔಟ್ನ ‘ಸಾಯಿ ಗ್ರೀನ್ ಹೋಮ್ಸ್’ ಅಪಾರ್ಟ್ಮೆಂಟ್ನಲ್ಲಿ ಈ ರಕ್ತಸಿಕ್ತ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮಸುಂದರ್ (52), ಅವರ ಪತ್ನಿ ಲಕ್ಷ್ಮಿ (48) ಮತ್ತು ಕಿರಿಯ ಮಗಳು ಸುಪ್ರಿಯಾ (19) ಕೊಲೆಯಾದ ದುರ್ದೈವಿಗಳು. ಕೃತ್ಯ ಎಸಗಿದ ಹಿರಿಯ ಮಗಳು ಶ್ವೇತಾ (25) ಹಾಗೂ ಆಕೆಯ ಪ್ರಿಯಕರ ಕೆನತ್ (26) ಸದ್ಯ ತಲೆಮರೆಸಿಕೊಂಡಿದ್ದಾರೆ.
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಗಳಾದ ಕೆನತ್ ಹಾಗೂ ಶ್ವೇತಾ ಕಳೆದ ಎರಡು ತಿಂಗಳುಗಳಿಂದ ಇದೇ ಅಪಾರ್ಟ್ಮೆಂಟ್ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು (ಲಿವ್—ಇನ್). ಆದರೆ ಇವರಿಬ್ಬರ ಸಂಬಂಧಕ್ಕೆ ಶ್ವೇತಾ ಪೋಷಕರಿಂದ ತೀವ್ರ ವಿರೋಧವಿತ್ತು. ಹೀಗಾಗಿ ಮಗಳನ್ನು ಭೇಟಿಯಾಗಿ ಬುದ್ಧಿ ಹೇಳಲು ಶನಿವಾರ ಸಂಜೆ ತಂದೆ, ತಾಯಿ ಹಾಗೂ ತಂಗಿ ಹಳ್ಳಿಯಿಂದ ಬೆಂಗಳೂರಿನ ಶ್ವೇತಾ ಮನೆಗೆ ಬಂದಿದ್ದರು.
ಭಾನುವಾರ ಸಂಜೆ ಹೊರಗಡೆ ಸುತ್ತಾಡಿ ರಾತ್ರಿ 7:30ರ ಸುಮಾರಿಗೆ ಮನೆಗೆ ಮರಳಿದಾಗ, ಇವರ ನಡುವೆ ಮತ್ತೆ ಜೋರಾಗಿ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್ ಮಾರಕಾಸ್ತ್ರಗಳಿಂದ ಪೋಷಕರು ಹಾಗೂ ತಂಗಿಯ ಮೇಲೆ ಬರ್ಬರವಾಗಿ ದಾಳಿ ನಡೆಸಿದ್ದಾರೆ.
ದಾಳಿಯ ಸಮಯದಲ್ಲಿ ತಾಯಿ ಲಕ್ಷ್ಮಿ ಮತ್ತು ತಂಗಿ ಸುಪ್ರಿಯಾ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾರೆ. ತಂದೆ ಸೋಮಸುಂದರ್ ಅವರು ಹೇಗೋ ದಾಳಿಯಿಂದ ತಪ್ಪಿಸಿಕೊಂಡು ರಕ್ತಸಿಕ್ತ ಸ್ಥಿತಿಯಲ್ಲೇ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮಸುಂದರ್ ಕೂಡ ಸಾವನ್ನಪ್ಪಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಹೇಳಿದ್ದೇನು?
“ಮೊನ್ನೆ ತಂದೆ-ತಾಯಿ ಮತ್ತು ತಂಗಿ ಹಳ್ಳಿಯಿಂದ ಬಂದಿದ್ದಾರೆ ಎಂದು ಶ್ವೇತಾ ಅವರನ್ನು ಪ್ರೀತಿಯಿಂದಲೇ ಮನೆಯೊಳಗೆ ಕರೆದೊಯ್ದಿದ್ದಳು. ನಿನ್ನೆ ಸಂಜೆ ಎಲ್ಲರೂ ಹೊರಗಡೆ ಹೋಗಿ ಬಂದ ಬಳಿಕ ಈ ಘಟನೆ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ನಲ್ಲಿ ಈ ಕೊಲೆ ನಡೆದಿರುವುದು ನಮಗೆ ಗೊತ್ತಾಯಿತು” ಎಂದು ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಗಾರ್ಡ್ ವೀರ್ ಬಹದ್ದೂರ್ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಹತ್ಯೆ ನಡೆಸಿ ನಾಪತ್ತೆಯಾಗಿರುವ ಪ್ರೇಮಿಗಳಾದ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























