ಭಾರತವನ್ನು ಕೊಳಕು, ಹೊಲಸು ಎಂದು ಟ್ರಂಪ್ ಹೇಳಿದಾಗ ಸ್ವಯಂ ಘೋಷಿತ ದೇಶಪ್ರೇಮಿಗಳ ರಕ್ತ ಕುದಿಯಲಿಲ್ಲ, ಕರುಳು ಕಿತ್ತು ಬರಲಿಲ್ಲ! - Mahanayaka
2:43 PM Wednesday 22 - October 2025

ಭಾರತವನ್ನು ಕೊಳಕು, ಹೊಲಸು ಎಂದು ಟ್ರಂಪ್ ಹೇಳಿದಾಗ ಸ್ವಯಂ ಘೋಷಿತ ದೇಶಪ್ರೇಮಿಗಳ ರಕ್ತ ಕುದಿಯಲಿಲ್ಲ, ಕರುಳು ಕಿತ್ತು ಬರಲಿಲ್ಲ!

24/10/2020

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಗಿ ಭಾರತ ಸರ್ಕಾರವು ‘ನಮಸ್ತೆ ಟ್ರಂಪ್’ ಎಂಬ ಅದ್ದೂರಿ ಕಾರ್ಯಕ್ರಮವನ್ನು ಕೋಟಿ ಗಟ್ಟಲೆ ಹಣ ವಿನಿಯೋಗಿಸಿ ನಡೆಸಿತು. ಆದರೆ, ಭಾರತದಲ್ಲಿ ಭಾರತವನ್ನು ಹಾಡಿ ಹೊಗಳಿದ ಟ್ರಂಪ್ ಅಮೆರಿಕದಲ್ಲಿ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಭಾರತ ಕೊಳಕು ಎಂದ ಹೇಳಿದ್ದಾರೆ. ಜೊತೆಗೆ ಭಾರತ ಗಾಳಿಯಂತೂ ತುಂಬಾ ಹೊಲಸು ಎಂದು ಹೇಳಿದ್ದಾರೆ. ಭಾರತಕ್ಕೆ ಇಷ್ಟೊಂದು ಕೆಟ್ಟ ಭಾಷೆಯಲ್ಲಿ ಟ್ರಂಪ್ ಮಾತನಾಡಿದ್ದರೂ, ಸ್ವಯಂ ಘೋಷಿತ ದೇಶ ಪ್ರೇಮಿಗಳ ಪತ್ತೆಯೇ ಇಲ್ಲದಿರುವುದು ನಿಜಕ್ಕೂ ಆಶ್ಚರ್ಯ.

ಟ್ರಂಪ್ ನ ಜಾಗದಲ್ಲಿ ಬೇರೆ ಯಾರೇ ಇದ್ದರೂ, ಸಾಮಾಜಿಕ ಜಾಲತಾಣಗಳಲ್ಲಂತೂ ಟ್ರಂಪ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿತ್ತು, ಹ್ಯಾಶ್ ಟ್ಯಾಗ್ ಬಳಸಿ, ಟ್ರಂಪ್ ನನ್ನು ಟ್ರೋಲ್ ಮಾಡಲಾಗುತ್ತಿತ್ತು. ಆದರೆ, ಟ್ರಂಪ್ ಭಾರತವನ್ನು ಕೊಳಕು, ಹೊಲಸು ಎಂದಾಗಲೂ ಯಾರ ರಕ್ತವೂ ಕುದಿಯಲಿಲ್ಲ, ಯಾರ ಕರುಳೂ ಕಿತ್ತು ಬರಲಿಲ್ಲ, ಯಾರೂ ಅಮೆರಿಕದ ವಸ್ತುಗಳನ್ನು ಬಹಿಷ್ಕರಿಸಲಿಲ್ಲ, ಯಾರೂ ಟ್ರಂಪ್ ಗೆ ಬೆದರಿಕೆ ಹಾಕಲಿಲ್ಲ. ಏನೂ ನಡೆದಿಲ್ಲ. ಹಾಗಿದ್ದರೆ, ದೇಶಪ್ರೇಮ ಎಂದರೇನು? ಇದು ಭಾರತದಲ್ಲಿ ಯಾರೋ ಅಮಾಯಕರಿಗೆ ಬೋಧಿಸಲು ಇರುವ ವಾಕ್ಯ ಅಷ್ಟೆಯೇ?

ಪ್ರಧಾನಿ ಮೋದಿ ಅವರು ನಮಸ್ತೆ ಟ್ರಂಪ್ ವೇದಿಕೆಯಲ್ಲಿ ಟ್ರಂಪ್ ಜೊತೆಗೆ ನಡೆದಾಡಿದ್ದನ್ನೆಲ್ಲ ನಾವು ಗಮನಿಸಿದ್ದೇವೆ. ಟ್ರಂಪ್ ಪ್ರಧಾನಿ ಮೋದಿ ಅವರ ಸ್ನೇಹಿತ ಎಂದೂ ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ. ಆದರೆ, ಟ್ರಂಪ್ ಹೇಳಿಕೆಯನ್ನು ಪ್ರಧಾನಿ ಮೋದಿಯವರಾಗಲಿ, ಬಿಜೆಪಿ ನಾಯಕರಾಗಲಿ ಅಥವಾ ಕಾಂಗ್ರೆಸ್ ನಾಯಕರಾಗಲಿ ಯಾರೂ ಖಂಡಿಸದೇ ಇರುವುದು ನಿಜಕ್ಕೂ ಆಶ್ಚರ್ಯಕರವಾಗಿತ್ತು. ಟ್ರಂಪ್ ನಮ್ಮ ದೇಶವನ್ನು ನೇರವಾಗಿ ಹೊಲಸು, ಕೊಳಕು ಎಂಬಂತೆ ಹೇಳಿಕೆ ನೀಡಿದ್ದಾರೆ. ಹಾಗಿದ್ದರೂ ಟ್ರಂಪ್ ನನ್ನು ವಿರೋಧಿಸಿ ಯಾರಿಗೂ ಇಲ್ಲಿ ರಾಜಕೀಯ ಲಾಭವಿಲ್ಲದ ಕಾರಣ, ಬಿಜೆಪಿಯವರೂ ಮೌನವಾಗಿ ಕುಳಿತಿದ್ದಾರೆ. ಕಾಂಗ್ರೆಸ್ ಅಂತೂ ಬಾಯಿ ಮುಚ್ಚಿ ಕುಳಿತು ಎಷ್ಟೋ ವರ್ಷಗಳಾಗಿವೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ