ತಮಿಳುನಾಡು ಮೂಲದ ವೃದ್ಧರನ್ನು ರಕ್ಷಿಸಿ ಮಗನಿಗೆ ಒಪ್ಪಿಸಿದ ಸಾಮಾಜಿಕ ಕಾರ್ಯಕರ್ತ

ಉಡುಪಿ: ಎರಡು ದಿನಗಳ ಹಿಂದೆ ವೃದ್ಧಾಪ್ಯದ ಮರೆವು ಕಾಯಿಲೆಯಿಂದ ಬಳಲುತ್ತಿದ್ದ ತಮಿಳುನಾಡಿನ ವೃದ್ದರೋರ್ವರು ಕಿನ್ನಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ನಡೆದಾಡುತ್ತಿದ್ದವರನ್ನು ವಿಶು ಶೆಟ್ಟಿ ರಕ್ಷಿಸಿ ಇದೀಗ ವೃದ್ಧರ ಮಗನಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
ವೃದ್ಧರು ಷಣ್ಮುಗಂ (72 ವರ್ಷ) ಊರಿನವರೊಂದಿಗೆ ಕೊಲ್ಲೂರು ಕ್ಷೇತ್ರಕ್ಕೆ ನವರಾತ್ರಿ ಉತ್ಸವಕ್ಕೆ ಬಂದಿದ್ದು, ಕೊಲ್ಲೂರಿನಿಂದ ಯಾವುದೋ ವಾಹನದಲ್ಲಿ ಉಡುಪಿಗೆ ಬಂದು ಅತಂತ್ರರಾಗಿದ್ದರು. ಶುಭ್ರ ಪಂಚೆ ಹಾಗೂ ಶರ್ಟ್ ಧರಿಸಿದ್ದ ಇವರು ಬಟ್ಟೆಯನ್ನು ಬಿಚ್ಚಿ ಬಿಸಾಡಿ ಲುಂಗಿಯಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸುತ್ತಿದ್ದವರನ್ನು ವಿಷಯ ತಿಳಿದ ವಿಶು ಶೆಟ್ಟಿ ವೃದ್ಧರನ್ನು ರಕ್ಷಿಸಿ ತುರ್ತು ನೆಲೆಗಾಗಿ ಉದ್ಯಾವರದ ಕನಸಿನ ಮನೆ ಆಶ್ರಮಕ್ಕೆ ದಾಖಲಿಸಿದ್ದರು. ವೃದ್ಧರ ಜೊತೆಗಿದ್ದವರು ವೃದ್ದರು ಕಾಣೆಯಾದ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಕೊಲ್ಲೂರು ಠಾಣೆಗೆ ವೃದ್ಧರ ರಕ್ಷಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅತ್ತ ತಂದೆ ಕಾಣೆಯಾದ ಬಗ್ಗೆ ಸುದ್ದಿ ತಿಳಿದ ಮಗ ತಮಿಳುನಾಡಿನಿಂದ ಕೊಲ್ಲೂರಿಗೆ ಬಂದಿದ್ದಾರೆ. ಇದೀಗ ವೃದ್ಧರ ಮಗ ಹಾಗೂ ಕೊಲ್ಲೂರು ಪೊಲೀಸ್ ಉಡುಪಿಗೆ ಬಂದು ವಿಶು ಶೆಟ್ಟಿ ಮುಖಾಂತರ ವೃದ್ಧರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿರುತ್ತಾರೆ.
ತಂದೆಯನ್ನು ನೋಡಿದ ಮಗ ರಕ್ಷಣೆ ಮಾಡಿದ ವಿಶು ಶೆಟ್ಟಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಮಗನನ್ನು ನೋಡಿದ ವೃದ್ಧರು ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ವೃದ್ಧರ ಬಳಿ ರೂಪಾಯಿ ಮೂರು ಸಾವಿರ ಇದ್ದು ವಿಶು ಶೆಟ್ಟಿ ಅವರು ಮಗನಿಗೆ ಹಣವನ್ನು ಹಸ್ತಾಂತರಿಸಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ರಾಮದಾಸ್ ಪಾಲನ್ ಉದ್ಯಾವರ, ಪೌಲ್ ಸಿಜು ಹಾಗೂ ಆಶ್ರಮದ ಮೇಲ್ವಿಚಾರಕಿ ಕವಿತ ತುರ್ತು ನೆಲೆ ನೀಡುವ ಮುಖಾಂತರ ಸಹಕರಿಸಿದ್ದಾರೆ.