ಪ್ರದೋಷ್ ಮಾಫಿ ಸಾಕ್ಷಿ ಕೇಸ್: ಸಿಸಿಹೆಚ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್ - Mahanayaka

ಪ್ರದೋಷ್ ಮಾಫಿ ಸಾಕ್ಷಿ ಕೇಸ್: ಸಿಸಿಹೆಚ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್

darshan.jpg
13/08/2026

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನಿರಾಕರಿಸಿದ 59ನೇ ಸಿಸಿಹೆಚ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಯಲ್ಲಿ ಇತರ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ ಎಂದು ಸಿಸಿಹೆಚ್ ಕೋರ್ಟ್ ಆದೇಶಿಸಿತ್ತು. ಸಿಸಿಹೆಚ್ ಕೋರ್ಟ್ ನಿರ್ಧಾರವನ್ನು ಸವಾಲು ಮಾಡಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಮೇಲ್ಮನವಿ ಅರ್ಜಿಯ ಕುರಿತು ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿದ್ದು, ರಾಜ್ಯದ ವಿಶೇಷ ಅಭಿಯೋಜಕರಿಗೆ (SPP) ಮಾಹಿತಿ ನೀಡುವಂತೆ ಸೂಚಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್ಗೆ 59ನೇ ಸಿಸಿಹೆಚ್ ನ್ಯಾಯಾಲಯ ನೀಡಿದ್ದ ಆದೇಶ ದೊಡ್ಡ ಹಿನ್ನಡೆಯಾಗಿತ್ತು. ಪ್ರಕರಣದ 14ನೇ ಆರೋಪಿಯಾದ ಪ್ರದೋಷ್, ಕೊಲೆಯಾದ ದಿನ ನಡೆದ ಸಂಪೂರ್ಣ ಘಟನೆಯನ್ನು ಕೋರ್ಟ್ ಮುಂದೆ ತೆರೆದಿಟ್ಟು ‘ಮಾಫಿ ಸಾಕ್ಷಿ’ (Approver) ಯಾಗಲು ಅರ್ಜಿ ಸಲ್ಲಿಸಿದ್ದನು.

ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣಕ್ಕೆ ಪ್ರಮುಖ ತಿರುವು ಸಿಗುವ ಸಾಧ್ಯತೆ ಇರುವುದರಿಂದ, ಈ ಪ್ರಕ್ರಿಯೆಯಲ್ಲಿ ನಡೆಯುವ ಲೋಪದೋಷಗಳು ಹಾಗೂ ತಮ್ಮ ಆಕ್ಷೇಪಣೆಗಳನ್ನು ಮಂಡಿಸಲು ಅವಕಾಶ ನೀಡಬೇಕೆಂದು ದರ್ಶನ್ ಪರ ವಕೀಲರು ಸಿಸಿಹೆಚ್ ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಜಡ್ಜ್ ಸುಜಾತಾ ಮಡಿವಾಳಪ್ಪ ಅವರು ದರ್ಶನ್ ಸೇರಿದಂತೆ ಇತರ ಯಾವುದೇ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿ ಆಕ್ಷೇಪಣೆಯನ್ನು ತಿರಸ್ಕರಿಸಿದ್ದರು.

ಸಿಸಿಹೆಚ್ ನ್ಯಾಯಾಲಯದ ಈ ಆದೇಶಕ್ಕೆ ತಡೆ ತರಲು ಹಾಗೂ ತಮ್ಮ ವಾದ ಮಂಡನೆಗೆ ಅವಕಾಶ ಕೋರಿ ದರ್ಶನ್ ಪರ ವಕೀಲರು ಇದೀಗ ಹೈಕೋರ್ಟ್ನಲ್ಲಿ ರಿಟ್/ಮೇಲ್ಮನವಿ ಅರ್ಜಿ ಸಲ್ಲಿಸಿ ಕಾನೂನು ಸಮರ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ