ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಹತ್ಯೆ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ - Mahanayaka
10:48 PM Saturday 6 - December 2025

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಹತ್ಯೆ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ

15/11/2023

ಕೇರಳದ ಆಳುವದಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣವು ಜುಲೈ 28ರಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಶ‍್ಫಾಕ್ ಆಲಂಗೆ ಎರ್ನಾಕುಲಂ ಪೋಕ್ಸೊ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.

ವಿಚಾರಣೆಯ ನೇತೃತ್ವ ವಹಿಸಿದ್ದ ನ್ಯಾ. ಕೆ. ಸೋಮನ್ ಅವರು ಈ ತೀರ್ಪನ್ನು ಪ್ರಕಟಿಸಿದರು. ಪ್ರಾಥಮಿಕ ಮಾಹಿತಿ ವರದಿ ದಾಖಲಾದ 30 ದಿನಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸಿದ್ದ ಪೊಲೀಸರು, ನ್ಯಾಯಾಲಯದೆದುರು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

28 ವರ್ಷದ ಆರೋಪಿ ಆಲಂ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಾದ 302 (ಹತ್ಯೆ), 376 2(ಜೆ) (ಅಪ್ರಾಪ್ತ ಬಾಲಕಿಯ ಅತ್ಯಾಚಾರ), 366ಎ (ಅಪ್ರಾಪ್ತ ಬಾಲಕಿಯನ್ನು ಹೊತ್ತುಕೊಂಡು ಹೋಗುವುದು) ಹಾಗೂ 364 (ಹತ್ಯೆಗೈಯ್ಯುವ ಉದ್ದೇಶದಿಂದ ಅಪಹರಣ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಿಹಾರದ ವಲಸೆ ಕಾರ್ಮಿಕನಾದ ಆಲಂ ವಿರುದ್ಧ ಪೋಕ್ಸೊ ಕಾಯ್ದೆ, ಬಾಲ ನ್ಯಾಯ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಅಕ್ಟೋಬರ್ 4ರಂದು ಪ್ರಾರಂಭವಾಗಿದ್ದ ವಿಚಾರಣೆಯು ಕೇವಲ 26 ದಿನಗಳಲ್ಲಿ ಮುಕ್ತಾಯಗೊಂಡಿತು. ಮೃತ ಬಾಲಕಿಯು ಬಿಹಾರದ ದಂಪತಿಯ ಪುತ್ರಿಯಾಗಿದ್ದಳು. ಆಕೆಯ ಮೃತದೇಹವು ಜುಲೈ 29ರಂದು ಆಳುವ ಮಾರುಕಟ್ಟೆಯ ಹಿಂಭಾಗದ ಜೌಗು ಪ್ರದೇಶವೊಂದರಲ್ಲಿ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ 41 ಸಾಕ್ಷಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು ಹಾಗೂ 13 ದೋಷಾರೋಪಗಳಲ್ಲಿ ಆಲಂ ಅಪರಾಧಿ ಎಂಬ ಸಂಗತಿಯನ್ನು ನ್ಯಾಯಾಲಯ ಪತ್ತೆ ಹಚ್ಚಿತ್ತು.

ಇತ್ತೀಚಿನ ಸುದ್ದಿ