ಅಂಬೇಡ್ಕರ್ ಪರಿನಿಬ್ಬಾಣ ದಿನಾಂಕದಲ್ಲೇ ಬಾಬರಿ ಮಸೀದಿ ಧ್ವಂಸ ನಡೆದಿತ್ತು | ಇದರಲ್ಲಿಯೂ ಅಡಗಿದೆಯೇ ಕುತಂತ್ರ? - Mahanayaka
5:01 AM Saturday 25 - October 2025

ಅಂಬೇಡ್ಕರ್ ಪರಿನಿಬ್ಬಾಣ ದಿನಾಂಕದಲ್ಲೇ ಬಾಬರಿ ಮಸೀದಿ ಧ್ವಂಸ ನಡೆದಿತ್ತು | ಇದರಲ್ಲಿಯೂ ಅಡಗಿದೆಯೇ ಕುತಂತ್ರ?

06/12/2020

ಉತ್ತರಪ್ರದೇಶ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 28 ವರ್ಷವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾದ ಇಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನವೂ ಆಗಿದೆ.

ಬಾಬರಿ ಮಸೀದಿ ಧ್ವಂಸ ದಿನವನ್ನು ಮುಸ್ಲಿಮರು ಕಪ್ಪು ದಿನವಾಗಿ ಆಚರಿಸುತ್ತಿದ್ದಾರೆ. 16ನೇ ಶತಮಾನದ ಮಸೀದಿಯನ್ನು ಪುನರ್ ನಿರ್ಮಾಣ ಮಾಡುವಂತೆ ಕೋರಿ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ.

ಬಾಬರಿ ಮಸೀದಿ ಧ್ವಂಸವನ್ನು ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನಾಂಕ (ಡಿಸೆಂಬರ್  6 , 1956)ದಂದೇ ನಡೆಸಲಾಗಿತ್ತು. ಇದು ಈಗಲೂ ಚರ್ಚೆಯಲ್ಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು, ಜಾತಿ ಪದ್ಧತಿಯನ್ನು ಸಮಾಜಕ್ಕೆ ಹೇರಿದ್ದ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ ಮನುವಾದಿ ವ್ಯವಸ್ಥೆಯನ್ನು ಕೆಡವಿದ್ದರು.  ಅಂತಹ ಮಹಾನಾಯಕನ ಪರಿನಿಬ್ಬಾಣ ದಿನವನ್ನು ಮರೆಮಾಚಲೆಂದೇ ಇನ್ನೊಂದು ದೊಡ್ಡ ವಿವಾದವನ್ನು ಮನುವಾದಿಗಳು ಹೊತ್ತು ತರುವ ಮೂಲಕ ಡಿಸೆಂಬರ್ 6, 1992 ರಂದು ಬಾಬರಿ ಮಸೀದಿಯನ್ನು ಮನುವಾದಿಗಳು ಹೊಡೆದುರುಳಿಸಿದರು ಎಂಬ ಚರ್ಚೆಯೂ ಇದೆ.

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮನುವಾದಿಗಳು ಹಾಗೂ ಮುಸ್ಲಿಮರ ನಡುವೆ ಎರಡು ದಶಕಗಳಿಗೂ ಹೆಚ್ಚು ಕಾಲಗಳಿಂದ ಹೋರಾಟ ನಡೆಯುತ್ತಿದೆ.  2019ರಲ್ಲಿ ಈ ಬಗ್ಗೆ ಕೋರ್ಟ್ ತೀರ್ಪು ನೀಡಿ, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಿ, ಮಸೀದಿಗೆ ಪರ್ಯಾಯ ಜಾಗ ನೀಡುವುದಾಗಿ ಹೇಳಿತ್ತು. ಈ ತೀರ್ಪಿನ ಬಳಿಕವೂ ಇದೊಂದು ವಿವಾದವಾಗಿಯೇ ಸಾರ್ವಜನಿಕ ವಲಯದಲ್ಲಿ ಉಳಿದುಕೊಂಡಿದೆ. ಈ ನಡುವೆ ಈ ಮಸೀದಿ-ಮಂದಿರದ ಸ್ಥಳವು ಬೌದ್ಧ ಅರಸ , ಮೌರ್ಯ ಸಾಮ್ರಾಜ್ಯದ ಅಶೋಕನ ಕಾಲದಲ್ಲಿ ಬೌದ್ಧ ವಿಹಾರವಾಗಿತ್ತು ಎಂದು ಹೇಳಲಾಗಿದೆ. ರಾಮಮಂದಿರ ಕಾಮಗಾರಿ ಆರಂಭವಾದ ಸಂದರ್ಭದಲ್ಲಿ ಬೌದ್ಧರಿಗೆ ಸೇರಿದ ಸ್ಥೂಪಗಳು, ಬುದ್ಧನ ಪ್ರತಿಮೆಗಳ ಇದೇ ಸ್ಥಳದಲ್ಲಿ ಲಭ್ಯವಾಗಿತ್ತು. ಅಂತೂ ಈ ಸ್ಥಳ ವಿವಾದವನ್ನುಇನ್ನೂ ಬಿಟ್ಟಿಲ್ಲ.

ಇತ್ತೀಚಿನ ಸುದ್ದಿ