ನೋವಿನಲ್ಲೂ ಪರಿಸರ ಪ್ರೇಮ ಮೆರೆದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪರ್ಣಾ ಅವರ ನಿಧನ ಕನ್ನಡ ಚಿತ್ರರಂಗ, ಕಿರುತೆರೆಗೆ ದೊಡ್ಡ ಆಘಾತ ನೀಡಿದೆ. ಕನ್ನಡದ ನಂಬರ್ ಒನ್ ನಿರೂಪಕಿ ಎಂದು ಹೆಸರಾಗಿದ್ದ ಅಪರ್ಣಾ ಅವರ ಸಾವನ್ನು ಇನ್ನೂ ಎಷ್ಟೋ ಜನರಿಗೆ ಅರಿಗಿಸಿಕೊಳ್ಳಲಾಗುತ್ತಿಲ್ಲ.
ಇನ್ನೊಂದೆಡೆ ಪತ್ನಿಯ ಅಗಲಿಕೆಯ ನೋವಿನಲ್ಲಿರುವ ಅವರ ಪತಿ ನಾಗರಾಜ್ ಅವರು ನೋವಿನ ನಡುವೆಯೂ ಪರಿಸರ ಕಾಳಜಿಯನ್ನು ವಹಿಸಿದ್ದಾರೆ. ಅಪರ್ಣಾ ಅವರ ಅಂತಿಮ ದರ್ಶನಕ್ಕೆ ಆಗಮಿಸುವವರಲ್ಲಿ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ ಎಂದಿದ್ದಾರೆ.
ನಾಗರಾಜ್ ಅವರ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ, ಇಂತ ಹೊತ್ತಿನಲ್ಲೂ ನಿಮ್ಮ ಪರಿಸರ ಕಾಳಜಿಗೆ ಮೆಚ್ಚಲೇಬೇಕು ಎಂದಿದ್ದಾರೆ. ಭಗವಂತ ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ, ಇಡೀ ರಾಜ್ಯದ ಎಲ್ಲರೂ ನಿಮ್ಮ ದುಃಖದಲ್ಲಿ ಭಾಗಿಗಳು ಕನ್ನಡ ಪ್ರೇಮಿ ಅಪ್ಪಟ ಕನ್ನಡತಿ ಕನ್ನಡಿಗರ ಮನೆ ಮನೆಗಳಲ್ಲಿ ಅಜರಾಮರ, ಇಂಥ ಅತಿ ನೋವಿನ ಸಮಯದಲ್ಲೂ ಸಾಮಾಜಿಕ ಕಳಕಳಿಯ ಮೆರೆಯುತ್ತಿದ್ದೀರಿ ಧನ್ಯೋಸ್ಮಿ ಭಗವಂತ ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ. ಸಂಜೆ ಮೆಟ್ರೋ ದಲ್ಲಿ ಬರುವಾಗ ನೆನಪು ಮಾಡ್ಕೊಂಡಿದ್ದೆ ಸರ್.. ಭಗವಂತ ನಿಮಗೆ ಅವರ ಅಗಲಿಕೆಯ ನೋವನ್ನು ತಡೆಯುವ ಶಕ್ತಿ ಕೊಡಲಿ ಎಂದು ಕಾಮೆಂಟ್ ಮಾಡುವ ಮೂಲಕ ನಾಗರಾಜ್ ಅವರಿಗೆ ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97