ಮನೆಗೆ ನುಗ್ಗಿ ಚಿನ್ನಾಭರಣ, ಹಣದೋಚಿ ಪರಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೂಲದ ದರೋಡೆಕೋರರ ಬಂಧನ

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಜೆ.ಹೊಸಳ್ಳಿ ಗ್ರಾಮದ ಅನಂತರಾಮ್ ಎಂಬುವವರ ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಅನ್ಸರ್ ಆಲಿಯಾಸ್ ಅಂಚು, ಬೆಳ್ತಂಗಡಿ ಮೂಲದ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಮೂಡಿಗೆರೆ ತಾಲ್ಲೂಕು ಬೆಟ್ಟದಮನೆ ಗ್ರಾಮದ ಶೈನಿಂಗ್ ಕುಮಾರ್ ಆಲಿಯಾಸ್ ಶೈನಿ, ಅಣಜೂರು ಗ್ರಾಮದ ಅಶ್ರಫ್ ಆಲಿಯಾಸ್ ಹಸರಬ್, ಜನ್ನಾಪುರ ಗ್ರಾಮದ ಉಮೇಶ್ ಬಂಧಿತರು.
ಕಾಫಿ ವ್ಯಾಪಾರಕ್ಕೆ ಬಂದು ದರೋಡೆಗೆ ಸ್ಕೆಚ್ :
ಪ್ರಕರಣದಲ್ಲಿ ಆರೋಪಿಯಾಗಿರುವ ಬೆಟ್ಟದಮನೆ ಮೂಲದ ಶೈನಿಂಗ್ ಕುಮಾರ್ ಎಂಬಾತ ಕಾಫಿ ವ್ಯಾಪಾರಿಯಾಗಿದ್ದು ದರೋಡೆ ನಡೆದ ಅನಂತ ಹೆಬ್ಬಾರ್ ಅವರ ಮನೆಯಿಂದ ಕಾಫಿ ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ. ಅವನೇ ಈ ಮನೆಯನ್ನು ದರೋಡೆಗೆ ಟಾರ್ಗೆಟ್ ಮಾಡಿ ಉಳಿದವರನ್ನು ಒಟ್ಟು ಸೇರಿಸಿ ಈ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.
ಇವರೆಲ್ಲರೂ ದರೋಡೆ ಮಾಡುವ ಹಿಂದಿನ ದಿನ ಕೊಟ್ಟಿಗೆಹಾರದ ಅನಿಲ್ ಲಾಡ್ಜ್ ನಲ್ಲಿ ತಂಗಿದ್ದರು ಎನ್ನಲಾಗಿದೆ. ಇವರೆಲ್ಲಾ ಇಸ್ಪೀಟ್ ಆಟದ ಗ್ಯಾಂಗ್ ನಲ್ಲಿ ಪರಸ್ಪರ ಪರಿಚಯಸ್ಥರು ಎಂದು ತಿಳಿದುಬಂದಿದೆ.
ದರೋಡೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಇವರಲ್ಲಿ ಅನ್ಸರ್ ಎಂಬಾತ ದರೋಡೆ ನಡೆಸಿ ಎಸ್ಕೇಪ್ ಆಗುವಾಗ ಕತ್ತಲೆಯಲ್ಲಿ ದಾರಿ ತಪ್ಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದ, ಉಳಿದವರು ದರೋಡೆ ಮಾಡಿ ಬೇರೆ ಬೇರೆ ದಿಕ್ಕಿಗೆ ತೆರಳಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬೊಬ್ಬರೇ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಜೆ.ಹೊಸಳ್ಳಿ ಗ್ರಾಮದ ಅನಂತರಾಮ್ ಎಂಬುವವರ ಮನೆಗೆ ನುಗ್ಗಿದ್ದ ದರೋಡೆಕೋರರು ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ, ಮನೆಯವರಿಗೆಲ್ಲಾ ಹೆದರಿಸಿ, ತಡೆಯಲು ಬಂದ ಶ್ರೀನಿವಾಸಮೂರ್ತಿ ಎಂಬ ಕೆಲಸಗಾರರಿಗೆ ಕತ್ತಿ ಚಾಕುವಿನಿಂದ ಹಲ್ಲೆ ಮಾಡಿ ಮಾರಣಾಂತಿಕವಾದ ಗಾಯ ಮಾಡಿ, ಮನೆಯಲ್ಲಿದ್ದ ಟಿ.ವಿ.ಗಳನ್ನು ಒಡೆದು ಹಾಕಿ, ಗಾರ್ಡೇಜ್ ಬೀರುವಿನಲ್ಲಿದ್ದ 5,25,000 ರೂ. ನಗದು ಮತ್ತು 1,25,000 ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ದರೋಡೆ ಮಾಡಿದ್ದರು.
ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕ ಡಾ.ವಿಕ್ರಂ ಆಮಟೆ ಅವರು ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಯೋಗೇಂದ್ರನಾಥ್ ಮತ್ತು ಕೃಷ್ಣಮೂರ್ತಿ , ಶೈಲೇಂದ್ರ ಹೆಚ್.ಎಂ., ಪೊಲೀಸ್ ಉಪಾಧೀಕ್ಷಕ ಯೋಗೇಂದ್ರನಾಥ್ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಸೋಮೇಗೌಡ ಪಿ.ಪಿ. ನೇತೃತ್ವದಲ್ಲಿ, ಬಾಳೂರು ಪಿ.ಎಸ್.ಐ ದಿಲೀಪ್ ಕುಮಾರ್, ಮೂಡಿಗೆರೆ ಪಿ.ಎಸ್.ಐ ಶ್ರೀನಾಥ್ ರೆಡ್ಡಿ, ಗೋಣಿಬೀಡು ಪಿ.ಎಸ್.ಐ ಹರ್ಷವರ್ಧನ್, ಮೂಡಿಗೆರೆ ವೃತ್ತ ಕಚೇರಿಯ ಸಿ.ಟಿ.ರಮೇಶ್, ಗಿರೀಶ್ ಬಿ.ಸಿ, ಬಾಳೂರು ಠಾಣಾ ಸಿಬ್ಬಂದಿಗಳಾದ ವಿಶ್ವನಾಥ್ ಎ.ಎಸ್.ಐ, ನಂದೀಶ್, ರಾಜೇಂದ್ರ, ವಸಂತ್, ಓಂಕಾರನಾಯ್ಕ, ಸತೀಶ್, ಮಹೇಶ್, ಅನಿಲ್, ಮನು ಇವರನ್ನೊಳಗೊಂದ ಪ್ರತ್ಯೇಕ ತಂಡ ರಚಿಸಿ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಐದು ಜನ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಇನ್ನೂ ಒಂಟಿ ಮನೆಗಳನ್ನು ದರೋಡೆಕೋರರು ಟಾರ್ಗೆಟ್ ಮಾಡುತ್ತಿರುವುದರಿಂದಾಗಿ ಅಂತಹ ಮನೆಗಳಲ್ಲಿ ಸುರಕ್ಷಿತವಾಗಿರಲು ಸಾರ್ವಜನಿಕರು ಮಾಡಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಪೊಲೀಸರು ಇದೇ ವೇಳೆ ಅರಿವು ಮೂಡಿಸಿದ್ದಾರೆ.
* ಒಂಟಿ ಮನೆಗಳು ಇರುವಂತಹ ಕಡೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೇರಾಗಳನ್ನು ಅಳವಡಿಸಿಕೊಳ್ಳುವುದು.
* ಹೆಚ್ಚಿನ ಹಣ ಮತ್ತು ಒಡವೆಗಳನ್ನು ಮನೆಯಲ್ಲಿಡದೇ ಬ್ಯಾಂಕ್ ಲಾಕರ್ ಗಳಲ್ಲಿ ಇರಿಸಿಕೊಳ್ಳುವುದು.
* ಅಪರಿಚಿತ ವ್ಯಕ್ತಿಗಳು ಮನೆಯ ಬಳಿ ಬಂದಾಗ ಅಥವಾ ಬಾಗಿಲು ಬಡಿದಾಗ ಕಿಟಕಿಗಳಲ್ಲಿ ಗಮನಿಸಿ ನಂತರ ಬಾಗಿಲು ತೆರೆಯುವುದು.
* ಆದಷ್ಟು ಒಂಟಿ ಮನೆಗಳಲ್ಲಿ ಬರ್ಗಲರಿ ಅಲಾರಂ ಗಳನ್ನು ಅಳವಡಿಸಿಕೊಳ್ಳುವುದು.
* ಕಾಫಿ ಅಡಿಕೆ ಮತ್ತು ಇತರೆ ವ್ಯವಹಾರಗಳನ್ನು ಅಪರಿಚಿತರೊಂದಿಗೆ ನಡೆಸುವಾಗ ಅವರ ಹಿನ್ನೆಲೆ ಮತ್ತು ಪೂರ್ವಪರ ತಿಳಿದುಕೊಳ್ಳುವುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth