ಧರ್ಮಸ್ಥಳದಲ್ಲಿ ಶೀಘ್ರವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುತ್ತೇವೆ ಎಂದ ಬಿ.ವೈ.ವಿಜಯೇಂದ್ರ!: ಕಾರಣ ಏನ್ ಗೊತ್ತಾ? - Mahanayaka

ಧರ್ಮಸ್ಥಳದಲ್ಲಿ ಶೀಘ್ರವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುತ್ತೇವೆ ಎಂದ ಬಿ.ವೈ.ವಿಜಯೇಂದ್ರ!: ಕಾರಣ ಏನ್ ಗೊತ್ತಾ?

b y vijayendra
21/06/2026

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ, ಸತ್ಯಾಸತ್ಯತೆಯನ್ನು ಹೊರಹಾಕಲು ಅತಿ ಶೀಘ್ರದಲ್ಲೇ ಧರ್ಮಸ್ಥಳದ ಶ್ರೀ ಕ್ಷೇತ್ರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು. “ನಾವೆಲ್ಲರೂ ದೇವರನ್ನು ನಂಬುವವರು. ಧರ್ಮಸ್ಥಳದಲ್ಲಿ ಸಭೆ ಕರೆದು, ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರು ಮತ್ತು ಸತ್ಯ ಏನು ಎಂಬುದು ತಿಳಿಯಬೇಕಿದೆ. ಶ್ರೀ ಕ್ಷೇತ್ರದಲ್ಲಿಯೇ ಈ ಬಗ್ಗೆ ತೀರ್ಮಾನ ಆಗಬೇಕೆಂದು ನಿರ್ಧರಿಸಿದ್ದೇನೆ” ಎಂದು ವಿವರಿಸಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಚರ್ಚೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ಪಕ್ಷದ 63 ಶಾಸಕರ ಮೇಲೂ ಅನುಮಾನ ಮೂಡುವಂತಾಗಿದ್ದು, ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಬೇಸರವಾಗಿದೆ ಎಂದು ವಿಜಯೇಂದ್ರ ತಿಳಿಸಿದರು.

“ರಾಜ್ಯದ ಅಧ್ಯಕ್ಷನಾಗಿ ಈ ಬೆಳವಣಿಗೆ ನನಗೂ ಸಾಕಷ್ಟು ನೋವು ತಂದಿದೆ. ಶಾಸಕರು ಯಾರೆಷ್ಟೇ ದೊಡ್ಡವರಾಗಿದ್ದರೂ ಗೌಪ್ಯ ಮತದಾನ ನಡೆದ ಕಾರಣ ನನ್ನನ್ನೂ ಸೇರಿ ಎಲ್ಲರನ್ನೂ ಅನುಮಾನಿಸುವ ಪರಿಸ್ಥಿತಿ ಬಂದಿದೆ. ಯಾರೂ ಕೂಡ ಪುಕ್ಸಟ್ಟೆ ಮತ ಹಾಕಿರಲು ಸಾಧ್ಯವಿಲ್ಲ” ಎಂದ ಅವರು, ಈ ಕುರಿತು ತಾರ್ಕಿಕ ಅಂತ್ಯ ಹಾಡಲು ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವುದಾಗಿ ಹಾಗೂ ತಾವು ಮತ್ತು ಆರ್. ಅಶೋಕ್ ದೆಹಲಿಗೆ ತೆರಳಲಿರುವುದಾಗಿ ಸ್ಪಷ್ಟಪಡಿಸಿದರು.

ಅಡ್ಡ ಮತದಾನದ ಕುರಿತು ತನಿಖೆ ನಡೆಸಲು ಪಕ್ಷವು ಈಗಾಗಲೇ ‘ಸತ್ಯಶೋಧನಾ ಸಮಿತಿ’ಯನ್ನು ರಚಿಸಿದೆ. ಈ ಸಮಿತಿಯಲ್ಲಿ ಪ್ರಮುಖ ನಾಯಕರಾದ ಸಿ.ಟಿ. ರವಿ, ಮಹೇಶ್ ಟೆಂಗಿನಕಾಯಿ ಮತ್ತು ಮಾಜಿ ಸಚಿವ ಕೊಳ್ಳೇಗಾಲ ಮಹೇಶ್ ಇದ್ದಾರೆ ಎಂದು ಮಾಹಿತಿ ನೀಡಿದರು. ಇದೇ ವೇಳೆ, ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಕೆಲವರು ತಮ್ಮ ವಿರುದ್ಧ ಪರೋಕ್ಷ ದಾಳಿ ಹಾಗೂ ಕುತಂತ್ರ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಬಿಜೆಪಿಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಮತ್ತು ಯತ್ನಾಳ್ ಅವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಬೇಕು ಎಂಬ ಕುಮಾರ್ ಬಂಗಾರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ಪುಕ್ಸಟ್ಟೆ ಹೇಳಿಕೆ ಕೊಡುವವರು ಮೊದಲು ತಮ್ಮ ಕ್ಷೇತ್ರದಲ್ಲಿ ಜಿಲ್ಲಾ ಅಥವಾ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ನಿಂತು ಗೆದ್ದು ತೋರಿಸಲಿ. ಆಮೇಲೆ ಇದರ ಬಗ್ಗೆ ಮಾತನಾಡಲಿ” ಎಂದು ತೀಕ್ಷ್ಣವಾಗಿ ಸವಾಲು ಹಾಕಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ