ಮಾನಸಿಕ ಒತ್ತಡ: ಬಾವಿಗೆ ಜಿಗಿದು ಶಿಕ್ಷಕಿ ಆತ್ಮಹತ್ಯೆಗೆ ಶರಣು!
ಪಡುಬಿದ್ರಿ: ಮಾನಸಿಕ ಒತ್ತಡದಿಂದ ಶಿಕ್ಷಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.31ರಂದು ರಾತ್ರಿ ವೇಳೆ ಹೆಜಮಾಡಿಯಲ್ಲಿ ನಡೆದಿದೆ.
ಮೃತರನ್ನು ಹೆಜಮಾಡಿಯ ಜಯಂತಿ ಎಸ್.ಗಡಿಯಾರ(54) ಎಂದು ಗುರುತಿಸಲಾಗಿದೆ. ಎಸ್.ಕೋಡಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದ ಇವರು ವಿಪರೀತ ಮಾನಸಿಕ ಒತ್ತಡ ಆಗುತ್ತಿರುವುದಾಗಿ ತಿಳಿಸಿ ಅ.19ರಿಂದ ಕೆಲಸಕ್ಕೆ ಹೋಗಿರಲಿಲ್ಲ.
ಇದೇ ಚಿಂತೆಯಲ್ಲಿ ಇವರು ಮನೆಯ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಯ ಬೀಗ ಮುರಿದು ಸರಣಿ ಕಳ್ಳತನ
ಮಣಿಪಾಲ ಹಾಗೂ ಉಡುಪಿ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.
ಕಳ್ಳರು ಆರು ಅಂಗಡಿಗಳ ಬೀಗ ಮುರಿದು, ಅಂಗಡಿಯೊಳಗಿದ್ದ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯ ದೊಡ್ಡಣಗುಡ್ಡೆಯ ಒಂದು ಬಟ್ಟೆ ಮಳಿಗೆ ಮತ್ತು ಮೂರು ಜನರಲ್ ಶಾಪ್, ಉಡುಪಿ ನಗರ ಠಾಣೆ ವ್ಯಾಪ್ತಿಯ ಗುಂಡಿಬೈಲ್‌ನಲ್ಲಿ ಎರಡು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ.
ಉಡುಪಿ ಮತ್ತು ಮಣಿಪಾಲ ಠಾಣೆಯ ಪೊಲೀಸರು ಕಳ್ಳತನ ನಡೆದ ಅಂಗಡಿಗಳಿಗೆ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಗಳಲ್ಲಿದ್ದ ಸಾವಿರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕೋಟದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟದಲ್ಲಿ ಅ. 31ರಂದು ನಡೆದಿದೆ.
ಮೃತರನ್ನು ಕೋಟ ನಿವಾಸಿ 35ವರ್ಷದ ಪ್ರಕಾಶ್ ಮೊಗವೀರ ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ಹಾಗೂ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಸುಮಾರು 10 ವರ್ಷಗಳಿಂದ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದರು.ಇದೇ ವಿಚಾರದಲ್ಲಿ ಮನನೊಂದು ಅ.30ರ ರಾತ್ರಿಯಿಂದ ಅ. 31ರ ಮುಂಜಾನೆಯ ಮಧ್ಯಾವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡಕದ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ನಗದು ಕಳವು
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಸಾವಿರಾರು ರೂ.ಗಳನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರವೇಶದ್ವಾರದ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಕಾಲೇಜಿನೊಳಗೆ ಒಳ ನುಗ್ಗಿದ ಕಳ್ಳರು ಪ್ರಾಂಶುಪಾಲರ ಕಚೇರಿಗೆ ಲಗ್ಗೆ ಇಟ್ಟಿದ್ದಾರೆ. ಅಲ್ಲಿ ಕಪಾಟಿನ ಬೀಗವನ್ನು ಒಡೆದು 9 ಸಾವಿರ ರೂ ನಗದು ಕಳವುಗೈದಿದ್ದು, ಆ ಬಳಿಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ನುಗ್ಗಿದ್ದಾರೆ. ಅಲ್ಲಿ ಕಪಾಟಿನ ಬೀಗ ಒಡೆದು 20,200 ರೂ. ನಗದು ಸಹಿತ ಸೇರಿ ಒಟ್ಟು 29,200 ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka