ಬೆಡ್ ಸಿಗದೇ ಕೊರೊನಾ ಸೋಂಕಿತ ಒಂದೂವರೆ ವರ್ಷ ವಯಸ್ಸಿನ ಮಗು ಸಾವು!
28/04/2021
ವಿಶಾಖಪಟ್ಟಣಂ: ಬೆಡ್ ಸಿಗದೇ ಒಂದೂವರೆ ವರ್ಷ ವಯಸ್ಸಿನ ಮಗುವೊಂದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ನಡೆದಿದೆ.
ವಿಶಾಖಪಟ್ಟಣಂ ಜಿಲ್ಲೆಯ ಅಚ್ಚುತಪುರಂ ಮಂಡಲಕ್ಕೆ ಸೇರಿದ ವೀರಬಾಬು ಎಂಬವರ ಒಂದೂವರೆ ವರ್ಷ ವಯಸ್ಸಿನ ಮಗು ಜಾನ್ವಿಕ ಮೃತಪಟ್ಟ ಮಗುವಾಗಿದ್ದು, ಶೀತದ ಹಿನ್ನೆಲೆಯಲ್ಲಿ ಮಗುವನ್ನು ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಕೊವಿಡ್ ಟೆಸ್ಟ್ ವೇಳೆ ಮಗುವಿಗೆ ಕೊವಿಡ್ ದೃಢಪಟ್ಟಿದೆ.
ಇನ್ನೂ ವೈದ್ಯರ ಸೂಚನೆಯ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲು ತೆರಳಿದ್ದಾರೆ. 90 ನಿಮಿಷಗಳ ಕಾಲ ಮಗುವಿಗೆ ಬೆಡ್ ಸಿಗಲಿಲ್ಲ. ಆಂಬುಲೆನ್ಸ್ ನಲ್ಲಿಯೇ ಆಕ್ಸಿಜನ್ ವ್ಯವಸ್ಥೆ ಮಾಡಲಾಯಿತಾದರೂ, ತೀವ್ರವಾಗಿ ಬಳಲಿದ್ದ ಮಗು ಸಾವನ್ನಪ್ಪಿದೆ.
ಮಗುವಿಗೆ ಬೆಡ್ ಸಿಗದ ಕಾರಣ ಸಾವನ್ನಪ್ಪಿದೆ ಎಂದು ಪೋಷಕರು ಆಸ್ಪತ್ರೆಯ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆಸ್ಪತ್ರೆ ಮುಂದೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.