ಬೆಡ್ ಗಾಗಿ 3 ಗಂಟೆ ಕಾದು ಕಾರಿನಲ್ಲಿಯೇ ಮೃತಪಟ್ಟ ಮಹಿಳೆ - Mahanayaka

ಬೆಡ್ ಗಾಗಿ 3 ಗಂಟೆ ಕಾದು ಕಾರಿನಲ್ಲಿಯೇ ಮೃತಪಟ್ಟ ಮಹಿಳೆ

noida covid hospital
01/05/2021

ನವದೆಹಲಿ: ಕೊವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ಬಂದಿದ್ದ ಮಹಿಳೆ ಬೆಡ್ ಗಾಗಿ ಸತತ 3 ಗಂಟೆಗಳ ಕಾಲ ಕಾದು ಕೊನೆಗೆ ಕಾರಿನಲ್ಲಿಯೇ ಕೊನೆಯುಸಿರೆಳೆದ ಘಟನೆ ನೋಯ್ಡಾದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ.

35 ವರ್ಷದ ಕೊವಿಡ್ ಸೋಂಕಿತ ಮಹಿಳೆ ಜಾಗೃತಿ ಗುಪ್ತಾ ಸಾವನ್ನಪ್ಪಿದವರಾಗಿದ್ದಾರೆ. ಇವರ ಪತಿ ಹಾಗೂ ಮಕ್ಕಳು ಮಧ್ಯಪ್ರದೇಶದಲ್ಲಿರುವ ಕಾರಣ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಕೊವಿಡ್ ನಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆಯನ್ನು ಅವರು ವಾಸಿಸುತ್ತಿದ್ದ ಮನೆಯ ಮಾಲಿಕ ಆಸ್ಪತ್ರೆಗೆ ಕರೆತಂದಿದ್ದಾರೆ.

ಮಹಿಳೆಯನ್ನು ಕಾರಿನಲ್ಲಿ ಮಲಗಿಸಿ ಆಸ್ಪತ್ರೆಗೆ ತೆರಳಿ ಬೆಡ್ ವ್ಯವಸ್ಥೆ ಮಾಡಲು ಆ ವ್ಯಕ್ತಿ ಬಹಳಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ಯಾರೂ ಅವರಿಗೆ ಸ್ಪಂದಿಸಲಿಲ್ಲ. 3:30ರ ವೇಳೆಗೆ ಉಸಿರಾಡಲು ಸಾಧ್ಯವಾಗದೇ ಮಹಿಳೆ ಕಾರಿನಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಇಡೀ ದೇಶದಲ್ಲಿಯೇ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಇರುವ ಉತ್ತರಪ್ರದೇಶದಲ್ಲಿ ಕೊವಿಡ್  ಪರಿಸ್ಥಿತಿಗಳು ಅತ್ಯಂತ ನರಕ ಸಾದೃಶ್ಯವಾಗಿದೆ. ಆದರೆ, ಯೋಗಿ ಸರ್ಕಾರವು ಸರ್ಕಾರದ ವಿರುದ್ಧದ ಯಾವುದೇ ಮಾಹಿತಿಗಳನ್ನು ಹೊರ ಬರಲು ಬಿಡುತ್ತಿಲ್ಲ. ಪ್ರಶ್ನಿಸಿದ ಪತ್ರಕರ್ತರನ್ನು ಕೂಡಿ ಹಾಕುವಂತಹ ಘಟನೆಗಳು ನಡೆಯುತ್ತಿವೆ.

ಉತ್ತರಪ್ರದೇಶದಲ್ಲಿ  ಕೊವಿಡ್ ರೋಗಿಗಳು  ಆಕ್ಸಿಜನ್ ಸಿಗದೇ ರಸ್ತೆಯಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಯೋಗಿ ಆದಿತ್ಯನಾಥ್, ಕೊವಿಡ್ ವಿರುದ್ಧ ಕ್ರಮಕ್ಕೆ ವಿಫಲವಾಗಿದ್ದರೂ ಅದನ್ನು ಹೊರ ಬರಲು ಬಿಡುತ್ತಿಲ್ಲ ಎಂದು ರಾಷ್ಟ್ರಮಟ್ಟದ ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಸುದ್ದಿ