ಪ್ರಹ್ಲಾದ್ ಜೋಶಿಗೆ ಬಿಗ್ ಶಾಕ್: ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಜಿ ಕಣಕ್ಕಿಳಿಯಲು ನಿರ್ಧರಿಸಿದ್ದು, ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಬಹಿರಂಗವಾಗಿಯೇ ಹೇಳಿಕೆ ನೀಡಿದರು.
ಬೆಂಗಳೂರು ಅರಮನೆ ಮೈದಾನದ ರಸ್ತೆಯಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣದಲ್ಲಿ ಸಮುದಾಯದ ಸ್ವಾಮೀಜಿ ಹಾಗೂ ಮುಖಂಡರ ಜೊತೆಗೆ ಸಭೆ ನಡೆಯಿತು. ಈ ವೇಳೆ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ ಅವರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಒತ್ತಾಯವಿತ್ತು. ಕಳೆದ 16 ದಿನಗಳಿಂದ ನಮ್ಮ ನಿರ್ಧಾರ ಮಾಧ್ಯಮದ ಮೂಲಕ ಪ್ರಕಟ ಮಾಡುತ್ತಾ ಬಂದಿದ್ದೇವೆ. ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿದೆ ಅಂತ ಧಾರವಾಡದ ಜನರು ಮಾತನಾಡುತ್ತಿದ್ದಾರೆ. ಇದು ಜನರಿಗೆ ದ್ರೋಹ ಮಾಡಿದಂತೆ ಆಗಲಿದೆ. ಧರ್ಮದಲ್ಲಿ ರಾಜಕೀಯ ಇರಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ. ನೊಂದ ಜನರು ನಮ್ಮ ಜೊತೆಗೆ ನೋವು ತೊಡಗಿಕೊಂಡರು. ಹೀಗಾಗಿ ಚುನಾವಣಾ ಸ್ಪರ್ಧೆಗೆ ಬಂದಿದ್ದೇನೆ ಎಂದಿದ್ದಾರೆ.
ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಬಹಿರಂಗವಾಗಿಯೇ ಹೇಳಿದ್ದು, ಧಾರವಾಡ ಸಂಸದ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಕರೆ ನೀಡಿದ್ದರು. ನಾನು ಸ್ವಂತವಾಗಿ ಮಾತನಾಡುತ್ತಿಲ್ಲ, ಪ್ರಲ್ಹಾದ್ ಜೋಶಿಯವರ ಕೈಯಲ್ಲಿ ನೋವು ಅನುಭವಿಸಿದ ಜನರ ಧ್ವನಿಗಾಗಿ ನಾನು ಹೋರಾಟ ನಡೆಸುತ್ತಿದ್ದೇನೆ. ಅವರ ಆಡಳಿತ ವಿನಾಶಕಾರಿಯಾಗಿದೆ. ಮತ್ತು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಮತ್ತು ಲಿಂಗಾಯತ ಸಮುದಾಯದ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ನ್ಯಾಯುತವಾಗಿ ನಡೆಸಿಕೊಳ್ಳಲಾಗಿದೆ ಎಂದು ಪಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದರು.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಲಾಗಿದೆ. ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅರ್ಧಕ್ಕೆ ಕೆಳಗೆ ಇಳಿಸಲಾಗಿದೆ. ಇದು ಲಿಂಗಾಯತ ಸಮುದಾಯದವರಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದ್ದರು. ಈ ಎಲ್ಲ ಕಾರಣಗಳಿಂದ ಶಿರಹಟ್ಟಿಯ ಪಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth