ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಹಣಕ್ಕಾಗಿ ತಂಗಿ ಸಹಿತ ಹೆತ್ತವರನ್ನೇ ಕೊಂದ ಮಗ! - Mahanayaka
11:10 PM Thursday 13 - August 2026

ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಹಣಕ್ಕಾಗಿ ತಂಗಿ ಸಹಿತ ಹೆತ್ತವರನ್ನೇ ಕೊಂದ ಮಗ!

vijayanagara
02/02/2026

ಕೊಟ್ಟೂರು: ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ತಂದೆ, ತಾಯಿ ಹಾಗೂ ತಂಗಿಯ ಭೀಕರ ಕೊಲೆ ಪ್ರಕರಣದ ತನಿಖೆಯಲ್ಲಿ ಈಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಮೊದಲು ತಂಗಿಯ ಪ್ರೇಮ ಪ್ರಕರಣ ಹಾಗೂ ಗರ್ಭಿಣಿಯಾಗಿದ್ದ ವಿಚಾರವೇ ಕೊಲೆಗೆ ಕಾರಣ ಎಂದು ನಂಬಲಾಗಿತ್ತು. ಆದರೆ, ಪೊಲೀಸರ ತನಿಖೆಯಲ್ಲಿ ಇದು ಹಣದಾಸೆಗಾಗಿ ನಡೆದ ಕೊಲೆ ಎಂಬ ಸತ್ಯ ಬಯಲಾಗಿದೆ.

ತನಿಖೆ ದಾರಿ ತಪ್ಪಿಸಲು ಯತ್ನ: ಆರೋಪಿ ಅಕ್ಷಯ್ ತನ್ನ ತಂಗಿ ಅಂತರ್ಜಾತಿಯ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು ಮತ್ತು ಆಕೆ ಗರ್ಭಿಣಿಯಾಗಿದ್ದ ಕಾರಣ ಕುಟುಂಬದ ಗೌರವ ಉಳಿಸಲು ಕೊಲೆ ಮಾಡಿರುವುದಾಗಿ ಸುಳ್ಳು ಕಥೆ ಕಟ್ಟಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದನು.

ರೂ. 1.20 ಕೋಟಿ ಎಫ್‌ ಡಿ ಹಣದ ಕಿರಿಕ್: ತಂದೆ ಬ್ಯಾಂಕ್‌ ನಲ್ಲಿ ಇಟ್ಟಿದ್ದ ಸುಮಾರು 1.20 ಕೋಟಿ ರೂಪಾಯಿ ಫಿಕ್ಸೆಡ್ ಡಿಪಾಸಿಟ್ (FD) ಹಣದ ವಿಚಾರವಾಗಿ ಮನೆಯಲ್ಲಿ ಗಲಾಟೆ ನಡೆದಿತ್ತು. ಅಷ್ಟೇ ಅಲ್ಲದೆ, ತಂದೆಯು ಮಗಳ ವಿದ್ಯಾಭ್ಯಾಸಕ್ಕಾಗಿ 50 ಲಕ್ಷ ರೂಪಾಯಿಗಳನ್ನು ಆಕೆಯ ಹೆಸರಿನಲ್ಲಿ ಎಫ್‌ಡಿ ಮಾಡಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದ ಅಕ್ಷಯ್‌ ಗೆ ಈ ಹಣದ ಮೇಲೆ ಕಣ್ಣಿತ್ತು.

ಮಾವನ ಐಡಿಯಾ: ಹಣದ ಆಸೆಗೆ ಬಿದ್ದ ಅಕ್ಷಯ್ ತನ್ನ ಮಾವ ವಸಂತ ಎಂಬಾತನ ಬಳಿ ಈ ಬಗ್ಗೆ ಚರ್ಚಿಸಿದ್ದನು. ಮಾವನೇ ಅಕ್ಷಯ್‌ಗೆ ಕುಟುಂಬವನ್ನು ಕೊಲೆ ಮಾಡುವಂತೆ ಐಡಿಯಾ ಕೊಟ್ಟಿದ್ದ ಎನ್ನಲಾಗಿದ್ದು, ಪೊಲೀಸರು ಈಗ ಮಾವ ವಸಂತನನ್ನು ಕೂಡ ಬಂಧಿಸಿದ್ದಾರೆ.

‘ದೃಶ್ಯಂ’ ಸಿನಿಮಾ ಶೈಲಿಯ ಸಂಚು: ಕೊಲೆ ಮಾಡಿದ ನಂತರ ಅಕ್ಷಯ್ ಶವಗಳನ್ನು ಮನೆಯ ಹಾಲ್‌ನಲ್ಲಿಯೇ ಗುಂಡಿ ತೋಡಿ ಹೂತು ಹಾಕಿ, ಯಾರೂ ಇಲ್ಲದಂತೆ ನಾಟಕವಾಡಿದ್ದನು.

ಮುಂದುವರಿದ ತನಿಖೆ: ತಂಗಿಯ ಪ್ರಿಯಕರನನ್ನು ಕೂಡ ಕೊಲೆ ಮಾಡಿರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ಈಗ ಆ ದಿಕ್ಕಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ, ಕುಟುಂಬದ ಗೌರವದ ಹೆಸರಿನಲ್ಲಿ ನಡೆದಿದೆ ಎನ್ನಲಾದ ಈ ಕೊಲೆ ಪ್ರಕರಣವು ಅಂತಿಮವಾಗಿ ಆಸ್ತಿ ಮತ್ತು ಹಣದಾಸೆಗಾಗಿ ನಡೆದ ಕ್ರೂರ ಕೃತ್ಯ ಎಂಬುದು ಸಾಬೀತಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ