ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ 14 ಸಾವಿರ ರೂ. ದಂಡ!

ಮೂಡಿಗೆರೆ: ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪದ ಮೇಲೆ ದ್ವಿಚಕ್ರ ವಾಹನ ಚಾಲಕನಿಗೆ ಮೂಡಿಗೆರೆ ನ್ಯಾಯಾಲಯ ರೂ. 14 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಜೂನ್ 2 ರಂದು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರು ತಮ್ಮ ಸಿಬ್ಬಂದಿಯೊಂದಿಗೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿದರು.
ಬೈಕ್ ಚಾಲನೆ ಮಾಡುತ್ತಿದ್ದ ರುದ್ರೇಶ್ ನಾಯ್ಕ ಎಂಬ ವ್ಯಕ್ತಿಯು ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡುತ್ತಿದ್ದುದು ಅಲ್ಲದೇ ಹೊಗೆ ತಪಾಸಣೆ ಮಾಡಿಸದೇ ಇರುವುದು, ಡಿ.ಎಲ್. ಇಲ್ಲದೇ ಬೈಕ್ ಚಾಲನೆ ಮಾಡುತ್ತಿದುದು, ಬೈಕ್ ಗೆ ಸೂಕ್ತ ದಾಖಲೆಗಳನ್ನು ಹೊಂದಿಲ್ಲದಿರುವುದು ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಬೈಕ್ ಸವಾರನ ಮೇಲೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಕರಣವನ್ನು ತ್ವರಿತವಾಗಿ ಮತ್ತು ಗಂಭೀರವಾಗಿ ಪರಿಗಣಿಸಿದ ಮೂಡಿಗೆರೆ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಬೈಕ್ ಚಾಲಕನಿಗೆ ರೂ. 14 ಸಾವಿರ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಇತ್ತೀಚೆಗೆ ಅಪ್ತಾಪ್ತ ವಯಸ್ಕನೋರ್ವನಿಗೆ ಸ್ಕೂಟಿ ಚಾಲನೆ ಮಾಡಲು ನೀಡಿದ್ದ ವಾಹನ ಮಾಲೀಕರಿಗೆ ಮೂಡಿಗೆರೆ ನ್ಯಾಯಾಲಯ ರೂ. 25 ಸಾವಿರ ದಂಡ ವಿಧಿಸಿತ್ತು.
ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಈ ತೀರ್ಪುಗಳು ಎಚ್ಚರಿಕೆಯ ಗಂಟೆಯಾಗಿದ್ದು, ಚಾಲಕರು ಸುರಕ್ಷಿತ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸುವ ಅಗತ್ಯತೆಯನ್ನು ಈ ತೀರ್ಪುಗಳು ಎತ್ತಿ ಹಿಡಿದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: