ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ: ಹೊಟೇಲ್ ಸೀಜ್ ಮಾಡಿದ ಚಿಕ್ಕಮಗಳೂರು ಪೊಲೀಸರು

ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ ಭೂಲೋಕದ ಸ್ವರ್ಗವೇ ಸರಿ. ಕಣ್ಣಿನ ದೃಷ್ಠಿ ಮುಗಿದರೂ ಮುಗಿಯದ ಬೆಟ್ಟಗುಡ್ಡಗಳ ಸಾಲು. ಇಲ್ಲಿನ ಸೌಂದರ್ಯದ ರಾಶಿಗೆ ಪ್ರವಾಸಿಗರು ಕೂಡ ಫುಲ್ ಫಿದಾ. ಮುಳ್ಳಯ್ಯನಗಿರಿ ಟು ದತ್ತಪೀಠ, ದೇವರಮನೆಗುಡ್ಡ, ರಾಣಿಝರಿ ಮತ್ತಷ್ಟು ಚೆಂದ. ಇಲ್ಲಿನ ಪ್ರಕೃತಿಯಷ್ಟೆ ನಾನ್ ವೆಜ್ ಕೂಡ ಅಷ್ಟೆ ಚೆಂದ. ಕಾಫಿನಾಡು ನಾನ್ ವೆಜ್ ಗೂ ಕೂಡ ಫೇಮಸ್. ಒಂದು ಹೋಟೇಲ್ ಗಿಂತ ಮತ್ತೊಂದು ಹೋಟೇಲ್ ರುಚಿ, ಶುಚಿಗೆ ಹೆಸರುವಾಸಿ, ಆದ್ರೆ ಇದೀಗ ಪೊಲೀಸರ ರೈಡ್ ನಿಂದ ಕೆಲ ಹೋಟೇಲ್ ನಿಜ ಬಣ್ಣ ಬಯಲು ಆಗಿದೆ. ಕುರಿ ಮಾಂಸದ ಬಿರಿಯಾನಿ ಬದಲು ಗೋ ಮಾಂಸದ ಬಿರಿಯಾನಿ ನೀಡಿ ವ್ಯಕ್ತಿಯೋರ್ವ ಪೊಲೀಸರ ಅತಿಥಿ ಆಗಿದ್ದಾರೆ.
ರೆಡ್ ಹ್ಯಾಂಡ್ ಆಗಿ ಸೀಜ್ ಮಾಡಿದ ಚಿಕ್ಕಮಗಳೂರು ಪೊಲೀಸರು:
ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ಜಿಲ್ಲೆ. ಆ ಪ್ರವಾಸೋದ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ದಿನದಿಂದ ದಿನಕ್ಕೆ ಕಾಫಿನಾಡ ಪ್ರವಾಸೋದ್ಯಮವೂ ಬೆಳೆಯುತ್ತಲೇ ಇದೆ. ಪ್ರವಾಸಿಗರನ್ನ ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರು ಕೂಡ ಇನ್ನಿಲ್ಲದ ಕರಸತ್ತು ನಡೆಸುತ್ತಿದ್ದಾರೆ.
ಆದ್ರೆ, ಪ್ರವಾಸಿಗರನ್ನ ಆಕರ್ಷಿಸೋದ್ರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್ ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಚ್ ಅಡುಗೆ ಮಾಡುತ್ತಿದ್ದಾರೆ. ಕುರಿ ಮಟನ್ ಕೆ.ಜಿ.ಗೆ 700-800 ರೂಪಾಯಿ. ಆದ್ರೆ, ದನದ ಮಟನ್ 200-300 ರೂಪಾಯಿಗೆ ಸಿಗುತ್ತೆ. ಹಾಗಾಗಿ, ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಕ್ಸ್ ಮಾಡಿ ಅಡುಗೆ ಮಾಡಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳೀಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ ಐದು ಕೆ.ಜಿ. ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ.
ಹೋಟೆಲ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ:
ಯಾವಾಗ ಹೋಟೆಲ್ ನಲ್ಲಿ ದನದ ಮಾಂಸ ಬಳಸುತ್ತಾರೆ ಎಂದು ಗೊತ್ತಾಯ್ತೋ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ, ಜಿಲ್ಲೆಗೆ ಬರುವ ಲಕ್ಷಾಂತರ ಪ್ರವಾಸಿಗರು ಕೂಡ ಜಿಲ್ಲೆಯ ಸೌಂದರ್ಯದಷ್ಟೆ ಇಲ್ಲಿನ ಊಟವನ್ನೂ ಲೈಕ್ ಮಾಡುತ್ತಾರೆ. ಆ ರೀತಿ ನಾನ್ ವೆಜ್ ಪ್ರಿಯರನ್ನೆ ಬಂಡವಾಳ ಮಾಡಿಕೊಂಡು ಹೋಟೆಲ್ ಮಾಲೀಕರು ದಂಧೆ ಮಾಡುತ್ತಿದ್ದಾರೆ. ಆದರೆ, ಹೋಟೆಲ್ ಮಾಲೀಕರ ದುರಾಸಗೆ ಸ್ಥಳಿಯರು ಜೊತೆ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.
ದನದ ಮಾಂಸ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದ್ರೆ, ಕುರಿ ಮಾಂಸ ಎಂದೋ, ಕೋಳಿ ಮಾಂಸ ಎಂದೋ ಹೇಳಿ, ದನದ ಮಾಂಸ ತಿನ್ನಲು ಇಷ್ಟವಿಲ್ಲದವರನ್ನು ತಿನ್ನಿಸುವ, ಅಥವಾ ಮೋಸದ ಹಾದಿಯಲ್ಲಿ ಹಣ ಮಾಡುವುದು ಎಷ್ಟು ಸರಿ? ಇದು ಜನರ ಭಾವನೆಗಳ ಜೊತೆಗಿನ ಆಟವಲ್ಲವೇ? ಇಂತಹಾ ಮೋಸದ ಜಾಲಕ್ಕೆ ಪೊಲೀಸರು ಸಂಪೂರ್ಣ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.