Breaking News: ಲೋಕಸಭಾ ಚುನಾವಣಾ ದಿನಾಂಕ ಪ್ರಕಟ

ನವದೆಹಲಿ: ಲೋಕಸಭಾ ಚುನಾವಣೆ 2024 ದಿನಾಂಕ ಇಂದು ಪ್ರಕಟಿಸಲಾಗಿದ್ದು, ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಎಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಎಪ್ರಿಲ್ 26ರಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ.
ದೆಹಲಿ ವಿಜ್ಞಾನ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕ ಘೋಷಣೆ ಮಾಡಿ, ಚುನಾವಣೆ ಬಗ್ಗೆ ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆ ನಡೆಸಲು ಚುನಾವಣಾ ಆಯೋಗ ಸರ್ವಸನ್ನದ್ಧವಾಗಿದೆ. ಪ್ರತಿಯೊಂದು ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ, ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸುವುದು ನಮ್ಮ ಉದ್ದೇಶ ಎಂದರು.
ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ದೇಶದಲ್ಲಿ 97 ಕೋಟಿ ಮತದಾರರಿದ್ದಾರೆ. 1.5 ಕೋಟಿ ಭದ್ರತಾ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ತಿಳಿಸಿದರು.
1.8 ಕೋಟಿ ಹೊಸ ಮತದಾರರು ಈ ಬಾರಿ ಮತಚಲಾಯಿಸಲಿದ್ದಾರೆ. 49.7 ಪುರುಷ ಮತದಾರರಿದ್ದಾರೆ. 49.1 ಕೋಟಿ ಮತದಾರಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತಚಲಾಯಿಸಲಿದ್ದಾರೆ. 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರಿದ್ದಾರೆ. ಈ ಬಾರಿ 2.18 ಲಕ್ಷ 100 ವರ್ಷಕ್ಕೂ ಮೇಲ್ಪಟ್ಟ ಹಿರಿಯರು ಮತಚಲಾಯಿಸಲಿದ್ದಾರೆ.
12 ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಪುರುಷ ಮತದಾರರಿಗಿಂತಲೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಳವಿದೆ. 40% ವಿಕಲ ಚೇತನರು ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮತದಾನ ಕೇಂದ್ರಗಳಲ್ಲಿ ನೀರು, ಶೌಚಾಲಯ, ಹೆಲ್ಪ್ಡೆಸ್ಕ್, ವಿದ್ಯುತ್ ಸೇರಿ ಮೂಲಕ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು
ಮತದಾನಕ್ಕೆ 55 ಲಕ್ಷ ಇವಿಎಂ ಮೆಷಿನ್ ಗಳ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳ ಕ್ರಿಮಿನಲ್ ಕೇಸ್ ಗಳ ಬಗ್ಗೆ ಮಾಹಿತಿ ಕಡ್ಡಾಯವಾಗಿ ನೀಡಬೇಕು. ಹಿಂಸಾಮುಕ್ತ ಚುನಾವಣೆ ಮಾಡಲು ಸಿದ್ಧತೆ ಮಾಡಲಾಗುತ್ತದೆ. ಬಾರ್ಡರ್ ಗಳಲ್ಲಿ ಡ್ರೋಣ್ ಮೂಲಕ ಕಟ್ಟೆಚ್ಚರ ವಹಿಸಲಾಗುತ್ತದೆ. ಹಿಂಸಾಚಾರ ನಡೆಸಿದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಪಕ್ಷಗಳು ನೀತಿ ಸಂಹಿತೆಯನ್ನು ಪಾಲಿಸಬೇಕು, ಮತದಾರರಿಗೆ ದುಡ್ಡು ಹಂಚಿದರೆ, ಅಕ್ರಮ ಸಾಗಾಟ ಮಾಡಿದರೆ ಕಠಿಣ ಕ್ರಮಕೈಗೊಳ್ಳುತ್ತೇವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth