ಲೈಂಗಿಕ ಕಿರುಕುಳದ ಆರೋಪ ಹೊತ್ತ ಬ್ರಿಜ್ ಭೂಷಣ್ ಶರಣ್ ಸಿಂಗ್ ಕಂಬಳ ಕಾರ್ಯಕ್ರಮಕ್ಕೆ ಅತಿಥಿ!

ಬೆಂಗಳೂರು: ತುಳುನಾಡಿನ ನೆಲದ ಸಂಸ್ಕೃತಿ ಕಂಬಳ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಆದ್ರೆ ಇದೀಗ ಈ ಕಾರ್ಯಕ್ರಮಕ್ಕೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳದ ನೀಡಿದ ಆರೋಪ, ಕಳಂಕ ಹೊತ್ತ ವ್ಯಕ್ತಿಯನ್ನು ಆಹ್ವಾನಿಸಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಒಂದೆಡೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈ ಕಂಬಳ ಕಾರ್ಯಕ್ರಮ ಆಯೋಜನೆಗೆ ಒಂದು ಕೋಟಿ ರೂ. ಅನುದಾನ ನೀಡಿದೆ. ಇನ್ನೊಂದೆಡೆ ಕಳಂಕ ಹೊತ್ತ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ ಎನ್ನುವ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿವೆ.
ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದರು. ಕ್ರೀಡಾಪಟುಗಳ ಹೋರಾಟಕ್ಕೆ ಬೆಂಬಲ ಕೂಡ ವ್ಯಕ್ತಪಡಿಸಿದ್ದರು. ಆದ್ರೆ ಕರ್ನಾಟಕದಲ್ಲ ರಾಜ್ಯದ ಕಾಂಗ್ರೆಸ್ ನಾಯಕರು ಲೈಂಗಿಕ ಕಿರುಕುಳ ಪ್ರಕರಣದ ಕಳಂಕ ಹೊತ್ತಿರುವ ಬ್ರಿಜ್ ಭೂಷಣ್ ಅವರನ್ನು ಕರೆದು ಸನ್ಮಾನ ಕಾರ್ಯಕ್ರಮ ಮಾಡಿಸುತ್ತಿದ್ದಾರೆ ಎನ್ನುವ ಆಕ್ರೋಶಗಳಿಗೆ ಕಾರಣವಾಗಿದೆ.
ಈ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಸ್ಪಷ್ಟನೆ ನೀಡಿದ್ದಾರೆ. ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕುಸ್ತಿಪಟುಗಳು ಗೆದ್ದಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್ ನಿಂದ ವಿಜೇತರನ್ನು ಸಂಸದ ಬ್ರಿಜ್ ಭೂಷಣ್ ಅವರು ಅಭಿನಂದಿಸಲು ಬಯಸಿದ್ದರು. ಸಿದ್ದಿ ಸಮುದಾಯದ ಬೇಡಿಕೆಯ ಹಿನ್ನೆಲೆಯಲ್ಲಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಅವರು ತಿಳಿಸಿದರು.