ಏಪ್ರಿಲ್ 28ಕ್ಕೆ ಕೆನಡಾದ ಸಾರ್ವತ್ರಿಕ ಚುನಾವಣೆ: ಭಾರತ ಮತ್ತು ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆ

ಏಪ್ರಿಲ್ 28ರಂದು ನಡೆಯಲಿರುವ ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದೆ ಎಂದು ಕೆನಡಾದ ಗುಪ್ತಚರ ಸೇವೆ ಹೇಳಿದೆ. ಭಾರತ ಮತ್ತು ಚೀನಾ ಎರಡೂ ದೇಶಗಳೂ ಕೆನಡಾ ಈ ಹಿಂದೆ ಮಾಡಿದ್ದ ಇದೇ ರೀತಿಯ ಆರೋಪವನ್ನು ನಿರಾಕರಿಸಿದ್ದವು. ಆದರೆ, ಇತ್ತೀಚಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಭಾರತ ಮತ್ತು ಚೀನಾ ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಕೃತಕ ಬುದ್ಧಿಮತ್ತೆಯನ್ನು ಹೆಚ್ಚಾಗಿ ಬಳಸುತ್ತಿವೆ ಎಂದು ಚುನಾವಣೆಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಕೆನಡಾದ ಭದ್ರತಾ ಗುಪ್ತಚರ ಸೇವೆಯ ಕಾರ್ಯಾಚರಣೆಗಳ ಉಪ ನಿರ್ದೇಶಕಿ ವನೆಸ್ಸಾ ಲಾಯ್ಡ್ ಆರೋಪಿಸಿದ್ದಾರೆ.
ಭಾನುವಾರ ಪ್ರಧಾನಿ ಮಾರ್ಕ್ ಕಾರ್ನಿ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ್ದು, ಈ ಬೆನ್ನಲ್ಲೇ ಗಂಭೀರ ಆರೋಪ ಕೇಳಿ ಬಂದಿದೆ.
ಭಾರತ ಸರ್ಕಾರವು ತನ್ನ ಭೌಗೋಳಿಕ ರಾಜಕೀಯ ಪ್ರಭಾವವನ್ನು ಹೆಚ್ಚಿಸಲು ಕೆನಡಾದ ಸಮುದಾಯಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಲಾಯ್ಡ್ ಹೇಳಿದ್ದಾರೆ.
ಈ ಚುನಾವಣೆಯ ಸಮಯದಲ್ಲಿ ಕೆನಡಾದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಚೀನಾ, ವಿಶೇಷವಾಗಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (PRC)ಎಐ-ಚಾಲಿತ ಸಾಧನಗಳನ್ನು ಬಳಸುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ರಷ್ಯಾ ಮತ್ತು ಪಾಕಿಸ್ತಾನ ಕೂಡ ಹಸ್ತಕ್ಷೇಪ ಮಾಡಲು ಪ್ರಯತ್ನಿಸಬಹುದು ಎಂದು ಲಾಯ್ಡ್ ಎಚ್ಚರಿಸಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ 2023ರಲ್ಲಿ ಆರೋಪಿಸಿದ್ದರು. ನಂತರ ಭಾರತ ಮತ್ತು ಕೆನಡಾ ನಡುವೆ ಈ ವಿಚಾರವಾಗಿ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಭಾರತ ತನ್ನ ಮೇಲಿನ ಆರೋಪವನ್ನು ಬಲವಾಗಿ ನಿರಾಕರಿಸಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj