ಹಿಮಾಚಲಪ್ರದೇಶದಲ್ಲಿ ನದಿಗೆ ಬಿದ್ದ ಕಾರು: ಓರ್ವ ಸಾವು, ಮಾಜಿ ಮೇಯರ್ ನ ಪುತ್ರ ನಾಪತ್ತೆ

06/02/2024
ಚೆನ್ನೈನ ಮಾಜಿ ಮೇಯರ್ ಓರ್ವರ ಪುತ್ರನ ಕಾರು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿರುವ ಘಟನೆ ಹಿಮಾಚಲಪ್ರದೇಶದಲ್ಲಿ ನಡೆದಿದ್ದು, ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಓರ್ವನನ್ನು ರಕ್ಷಣೆ ಮಾಡಲಾಗಿದೆ. ಮಾಜಿ ಮೇಯರ್ ನ ಪುತ್ರ ನಾಪತ್ತೆಯಾಗಿದ್ದಾರೆ.
ಚೆನ್ನೈ ಮಾಜಿ ಮೇಯರ್ ಸೈದೈ ದುರೈಸ್ವಾಮಿ ಪುತ್ರ ವೆಟ್ರಿ ದುರೈಸ್ವಾಮಿ ಹಾಗೂ ಗೋಪಿನಾಥ್ ಇತರರು ಪ್ರಯಾಣಿಸುತ್ತಿದ್ದ ಕಾರು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ನದಿಗೆ ಬಿದ್ದಿದೆ. ಕಾರನ್ನು ಹಿಮಾಚಲ ಪ್ರದೇಶದ ಟಬೋ ನಿವಾಸಿ ತೆಂಜಿನ್ ಎಂಬಾತ ಚಲಾಯಿಸುತ್ತಿದ್ದ.
ಸ್ಪಿತಿ ಕಣಿವೆಯಿಂದ ವಾಪಾಸ್ ಆಗುತ್ತಿದ್ದಾಗ ಸೆಟ್ಲೇಜ್ ನದಿಗೆ ಕಾರು ಬಿದ್ದು ದುರಂತ ಸಂಭವಿಸಿದೆ. ಅಧಿಕಾರಿಗಳು ಕಾರಿನಲ್ಲಿದ್ದ ಗೋಪಿನಾಥ್ ಎಂಬುವವರನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗೋಪಿನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ತೆಂಜಿನ್ ಎಂಬುವವರು ಸಾವನ್ನಪ್ಪಿದ್ದಾರೆ. ಆದರೆ ವೆಟ್ರಿ ದುರೈಸ್ವಾಮಿ ನಾಪತ್ತೆಯಾಗಿದ್ದಾರೆ.