ಅಬ್ದುಲ್ ಸಲಾಂ ಪುತ್ತಿಗೆ, ಮುನೀರ್ ಕಾಟಿಪಳ್ಳ ವಿರುದ್ಧ ಪ್ರಕರಣ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡನೆ - Mahanayaka

ಅಬ್ದುಲ್ ಸಲಾಂ ಪುತ್ತಿಗೆ, ಮುನೀರ್ ಕಾಟಿಪಳ್ಳ ವಿರುದ್ಧ ಪ್ರಕರಣ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡನೆ

sadashiva padubidre
24/05/2025


Provided by

ಮಂಗಳೂರು: ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಹಾಗೂ ಹಿರಿಯ ಪತ್ರಕರ್ತ ಅಬ್ದುಲ್ ಸಲಾಂ ಪುತ್ತಿಗೆ  ಇವರ ವಿರುದ್ಧ ಪುತ್ತೂರು ವೈದ್ಯಕೀಯ ಸಂಘವು ನ್ಯಾಯಾಲಯದಲ್ಲಿ ಹೂಡಿರುವ ಖಾಸಗಿ ದೂರಿನ ಪ್ರಕಾರ ಅವರ ವಿರುದ್ಧ ಎಫ್.ಐ.ಆರ್. ದಾಖಲಾಗಿರುವ ಪ್ರಕರಣವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ. ದ.ಕ. ಜಿಲ್ಲಾ ಸಮಿತಿಯು ಖಂಡಿಸಿದೆ.

ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ರೋಗಿಯೋರ್ವರ ಸಂಬಂಧಿಕರು ಹಾಗೂ ವೈದ್ಯರ ನಡುವೆ ನಡೆದ ಗದ್ದಲವನ್ನು, ಅಲ್ಲಿನ ಕೆಲ ಕೋಮುವಾದಿ ಮನಸ್ಥಿತಿಯವರು ವೈದ್ಯರ  ಜೊತೆ ಸೇರಿ ಕೋಮುವಾದಿಕರಣಗೊಳಿಸಲು ಯತ್ನಿಸಿದ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಅಬ್ದುಲ್ ಸಲಾಂ ಪುತ್ತಿಗೆ ಸೇರಿದಂತೆ ಹಲವಾರು ಪ್ರಗತಿಪರ ಹಾಗೂ ಸಮಾಜದಲ್ಲಿ ಸಾಮರಸ್ಯ ಬಯಸುವ ಮನಸ್ಸುಗಳು ಕಟುವಾಗಿ ಖಂಡಿಸಿದ್ದವು. ಆದರೆ ಪುತ್ತೂರು ವೈದ್ಯಕೀಯ ಸಂಘವು ಇದನ್ನೇ ಅಪರಾಧ ಎಂಬಂತೆ ಪುತ್ತೂರು ಪೊಲೀಸು ಠಾಣೆಗೆ ದೂರು ನೀಡಿ,  ದೂರಿನಲ್ಲಿ ಸತ್ಯಾಂಶ ಇಲ್ಲದ ಕಾರಣ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದಾಗ, ಪುತ್ತೂರು ವೈದ್ಯಕೀಯ ಸಂಘವು ಹತಾಶ ಮನೋಭಾವದಿಂದ ಇದೀಗ ಕೋರ್ಟಿನಲ್ಲಿ ಖಾಸಗಿ ದೂರು ದಾಖಲಿಸುವ ಮೂಲಕ ವೈದ್ಯರ ಕೋಮುವಾದಿ ಪ್ರವೃತ್ತಿಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದಂತಿದೆ. ಇದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ ಎಂದು ಸಂಘಟನೆ ಹೇಳಿದೆ.

ತನ್ನ ತಪ್ಪನ್ನು ಮರೆಮಾಚಲು ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರ ಮನೋಸ್ಥೈರ್ಯವನ್ನು ಕುಗ್ಗಿಸಬಹುದು ಎಂದುಕೊಂಡ್ಡಿದ್ದರೆ ಅದು ಅವರ ಭ್ರಮೆ. ಕೋಮುವಾದ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಎಷ್ಟೇ ಪ್ರಕರಣ ದಾಖಲಿಸಿದರೂ ಅದರ ವಿರುದ್ಧದ ಹೋರಾಟ ನಿಲ್ಲಲ್ಲ. ವೈದ್ಯ ವೃತ್ತಿಯು ಅತ್ಯಂತ ಮಾನವೀಯತೆ ಇರುವ ವೃತ್ತಿಯಾಗಬೇಕು. ವೈದ್ಯಕೀಯ ವೃತ್ತಿಯಲ್ಲಿ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ಯ, ಪಕ್ಷ  ಎಂಬ ಪರಿಭೇದ ಇರಬಾರದು  ವೈದ್ಯರು ಕೋಮುವಾದಿ ಮನೋಸ್ಥಿತಿಯನ್ನು ಬೆಳೆಸಿಕೊಂಡರೆ ಅದು ಸಮಾಜಕ್ಕೆ ಅಪಾಯಕಾರಿ. ಸರಕಾರ ಇಂತಹ ಕೋಮುವಾದಿ ಮನಸ್ಥಿತಿಯ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ವೈದ್ಯಕೀಯ ಸಂಘವು ಮುನೀರ್ ಕಾಟಿಪಳ್ಳ ಹಾಗೂ ಅಬ್ದುಲ್ ಸಲಾಂ ಪುತ್ತಿಗೆ ಇವರ ಮೇಲೆ ನ್ಯಾಯಾಲಯದಲ್ಲಿ ದಾಖಲಿಸಿರುವ ಸುಳ್ಳು ಮೊಕದ್ದಮೆಯನ್ನು ತಕ್ಷಣ ಹಿಂಪಡೆಯುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ — ದ.ಕ. ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ