ಸಿಜೆಪಿ ಸಂಸತ್ ಚಲೋ: ಬಂಧಿತ ಪ್ರತಿಭಟನಾಕಾರರು ವಿದ್ಯಾರ್ಥಿಗಳಲ್ಲ: ಹೊಸ ಕಾರಣ ನೀಡಿದ ದೆಹಲಿ ಪೊಲೀಸರು - Mahanayaka

ಸಿಜೆಪಿ ಸಂಸತ್ ಚಲೋ: ಬಂಧಿತ ಪ್ರತಿಭಟನಾಕಾರರು ವಿದ್ಯಾರ್ಥಿಗಳಲ್ಲ: ಹೊಸ ಕಾರಣ ನೀಡಿದ ದೆಹಲಿ ಪೊಲೀಸರು

cjp sansat chalo
20/07/2026

ನವದೆಹಲಿ: ಸಂಸತ್ ಭವನಕ್ಕೆ ಮೆರವಣಿಗೆ ನಡೆಸುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ, ವಶಕ್ಕೆ ಪಡೆಯಲಾದ ಪ್ರತಿಭಟನಾಕಾರರು ವಿದ್ಯಾರ್ಥಿಗಳಲ್ಲ ಮತ್ತು ಅವರ ಗುರುತನ್ನು ಪರಿಶೀಲಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದೇ ಕೇಂದ್ರ ದೆಹಲಿಯಲ್ಲಿ ಭಾರೀ ಭದ್ರತೆಯ ನಡುವೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಪ್ರತಿಭಟನಾಕಾರರು ಸಂಸತ್ ರಸ್ತೆ ಹಾಗೂ ಜಂತರ್ ಮಂತರ್ ಬಳಿ ಅಳವಡಿಸಲಾಗಿದ್ದ ಬಹುಸ್ತರದ ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಪೊಲೀಸ್ ವಾಹನಗಳ ಧ್ವಂಸ ಹಾಗೂ ಭದ್ರತಾ ಸಿಬ್ಬಂದಿಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಪಟೇಲ್ ಚೌಕ್, ಪಾರ್ಲಿಮೆಂಟ್ ಸ್ಟ್ರೀಟ್, ಕಾನ್ಸ್ಟಿಟ್ಯೂಷನ್ ಕ್ಲಬ್ ಮತ್ತು ಶಾಸ್ತ್ರಿ ಭವನ ಸೇರಿದಂತೆ ವಿವಿಧ ಸ್ಥಳಗಳಿಂದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ತಾತ್ಕಾಲಿಕ ಬಂಧನ ಕೇಂದ್ರಗಳಿಗೆ ರವಾನಿಸಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ಹಾಗೂ ಕ್ಷೇತ್ರ ತನಿಖೆಯ ಆಧಾರದ ಮೇಲೆ ಹಿಂಸಾಚಾರದಲ್ಲಿ ಭಾಗಿಯಾದ ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಈ ಕ್ರಮದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದು, ಪೊಲೀಸರು ಮಹಿಳೆಯರ ಮೇಲೆಯೂ ಅಮಾನವೀಯವಾಗಿ ಲಾಠಿ ಬೀಸಿದ್ದಾರೆ, ಅನ್ಯಾಯ ಪ್ರಶ್ನಿಸಲು ವಿದ್ಯಾರ್ಥಿಗಳೇ ಆಗಬೇಕೇ? ಎಲ್ಲರ ಬೆಂಬಲದೊಂದಿಗೆ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಸಬೂಬು ಹೇಳುತ್ತಿದ್ದಾರೆ ಆರೋಪಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ