ಬಿನ್ನಡಿಯಲ್ಲಿ ಕಾಫಿ ಬೋರ್ಡ್ ಅಧಿಕಾರಿಗಳ ಭೇಟಿ: ವೈಜ್ಞಾನಿಕ ಪರಿಹಾರ ಸೂಚನೆ ನೀಡಿದ ವಿಶ್ವನಾಥ್

ಕೊಟ್ಟಿಗೆಹಾರ: ಸಮೀಪದ ಬಿನ್ನಡಿ ಗ್ರಾಮಕ್ಕೆ ಭೇಟಿ ನೀಡಿದ ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳು ತೋಟಗಳ ವೀಕ್ಷಣೆ ನಡೆಸಿದರು. ಈ ಸಂದರ್ಭ ಕಾಫಿ ಬೋರ್ಡ್‌ನ ಹಿರಿಯ ಸಂಪರ್ಕ ಅಧಿಕಾರಿ ಶ್ರೀ ವಿಶ್ವನಾಥ್ ರೈತರಿಗೆ ವಿವಿಧ ವೈಜ್ಞಾನಿಕ ಸಲಹೆಗಳನ್ನು ನೀಡಿದರು.
ಅವರು ಮಾತನಾಡುತ್ತಾ, “ಈ ಭಾಗದಲ್ಲಿ ಕಾಫಿ ಬೆಳೆಗಳಿಗೆ ಕೊಳೆರೋಗ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ, ಬೆಳೆಗಾರರು ಬೋರ್ಡೊ ಮಿಶ್ರಣದ ಔಷಧಿ ಸಿಂಪಡನೆ ಮಾಡಲು ಮುಂದಾಗಬೇಕು. ಮಣ್ಣಿನ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿ, ಅದರ ಆಧಾರದ ಮೇಲೆ ಗೊಬ್ಬರ ಹಾಕಬೇಕು. ಅರೇಬಿಕಾ ಕಾಫಿಗೂ ಕಾಯಿಲೆಗಳ ಸಾಧ್ಯತೆ ಇರುವುದರಿಂದ ಗೊಂಚು ರೋಗ ತಡೆಯಲು ಕೂಡ ಔಷಧಿ ಸಿಂಪಡನೆ ಅಗತ್ಯವಾಗಿದೆ” ಎಂದರು.
ಅಲ್ಲದೇ ತೋಟಗಳಲ್ಲಿ ನೀರು ಸರಿಯಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ಮಾಡುವುದರ ಅಗತ್ಯವಿದೆ ಎಂದು ಅವರು ತಿಳಿಸಿದರು. “ಸಕಾಲದಲ್ಲಿ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಕಾಂಡ ಕೋರಕ ಹೆಚ್ಚುವುದು. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆಯಿಂದ ಮತ್ತು ಮಳೆಯಿಂದಾಗಿ ಹೆಚ್ಚಿನ ನೆರಳು ಕಡಿತ ಮಾಡುವುದರಿಂದ ಕೀಟಗಳ ಪಸರಣೆಗೆ ಕಾರಣವಾಗುತ್ತಿದೆ. ಕಾಫಿ ಬೆಲೆ ಹೆಚ್ಚಳದಿಂದಾಗಿ ರೋಗಬಾಧಿತ ಗಿಡಗಳನ್ನು ತೆರೆಯದೇ ಇಡುವ ಪ್ರವೃತ್ತಿ ಕೂಡ ಸಮಸ್ಯೆಗೆ ಕಾರಣವಾಗಿದೆ” ಎಂದರು.
ಈ ಅಧಿಕಾರಿಗಳ ಭೇಟಿ ವೇಳೆ ಗ್ರಾಮಸ್ಥರಾದ ಅರುಣ್, ಪ್ರದೀಪ್, ಸಂಜಯ್ ಗೌಡ, ಎ.ಆರ್. ಅಭಿಲಾಷ್, ರಾಜು, ವಿಜೇಂದ್ರ, ರಮೇಶ್, ಪ್ರಕಾಶ್, ಧರ್ಮರಾಜ್, ಸುನೀಲ್, ವಿನುತ, ಉಮೇಶ್ ಸೇರಿದಂತೆ ಬಿನ್ನಡಿಯ ಎಲ್ಲಾ ಪ್ರಮುಖ ಕಾಫಿ ಬೆಳೆಗಾರರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD