ಡಿ.ಸಿ. ಮನ್ನಾ ಭೂಮಿ ಅಂಬೇಡ್ಕರ್ ವೃತ್ತ ನಿರ್ಮಾಣ: ಮಂಗಳೂರಿನಲ್ಲಿ ಜಿಲ್ಲಾಧಿಕಾರಿ, ಐವಾನ್ ಡಿಸೋಜ  ಸಭೆ - Mahanayaka
10:35 AM Wednesday 22 - October 2025

ಡಿ.ಸಿ. ಮನ್ನಾ ಭೂಮಿ ಅಂಬೇಡ್ಕರ್ ವೃತ್ತ ನಿರ್ಮಾಣ: ಮಂಗಳೂರಿನಲ್ಲಿ ಜಿಲ್ಲಾಧಿಕಾರಿ, ಐವಾನ್ ಡಿಸೋಜ  ಸಭೆ

dc office mangalore
11/06/2025

ಮಂಗಳೂರು: ಡಿ.ಸಿ. ಮನ್ನಾ ಭೂಮಿ ಹಾಗೂ ಅಂಬೇಡ್ಕರ್ ಸರ್ಕಲ್ ವಿಚಾರದ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿ ಸೋಜ ಅವರು ಮಂಗಳೂರಿನ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.

ಸಭೆಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಡಿ.ಸಿ. ಮನ್ನಾ ಜಮೀನಿನ ವಿಚಾರದ ಬಗ್ಗೆ ಈ ಹಿಂದೆ   ನಡೆದ ಸಭೆಯ ಬಗ್ಗೆ ಪ್ರಸ್ತಾಪಿಸಿದಾಗ ಮತ್ತು ಜಿಲ್ಲೆಯಲ್ಲಿ ನಿವೇಶನ ಇಲ್ಲದಿರುವ ದಲಿತರ ಪರಿಸ್ಥಿತಿಯ ಬಗ್ಗೆ ತಿಳಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಈ ವಿಚಾರವಾಗಿ  ತಂಡ ರಚನೆ ಮಾಡಿ ಸಂಪೂರ್ಣ ಮಾಹಿತಿ ಕಲೆ ಹಾಕಿ ವಾರದೊಳಗೆ ಇದರ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಭರವಸೆ ನೀಡಿದರು.

ಡಿ.ಸಿ. ಮನ್ನಾ ಜಮೀನಿನ ಹಂಚಿಕೆಯ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಶಾಸಕರಾದ ಐವಾನ್ ಡಿ ಸೋಜ ರವರು, ಸರಕಾರದಿಂದ ಕಾನೂನಾತ್ಮಕ ನಿರ್ಣಯ ಕೈಗೊಳ್ಳಲು ಸರಕಾರದೊಂದಿಗೆ ಗಂಭೀರವಾಗಿ ಚರ್ಚಿಸುವ ಬಗ್ಗೆ ವಿಶ್ವಾಸವನ್ನು ಮೂಡಿಸಿದರು.

ಮಂಗಳೂರು ನಗರದ ಜ್ಯೋತಿ ಕೆಎಮ್ ಸಿ ಆಸ್ಪತ್ರೆಯ  ಬಳಿ ಅಂಬೇಡ್ಕರ್ ವೃತ್ತ ನಿರ್ಮಾಣ ಆಗಬೇಕು ಎನ್ನುವ ದಲಿತ ಸಂಘಟನೆಗಳ ಹಲವಾರು ವರ್ಷದ ಬೇಡಿಕೆಯಂತೆ ಕಾಮಗಾರಿಯ ಗುದ್ದಲಿ ಪೂಜೆ ನಡೆಸಿ ಹಲವು ತಿಂಗಳು ಕಳೆದರು ಇನ್ನೂ  ಕಾಮಗಾರಿ ಆರಂಭವಾಗದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಐವಾನ್ ಡಿಸೋಜ ಚರ್ಚಿಸಿದರು.

ಸಭೆಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ  ಸಂಚಾಲಕರಾದ ದೇವ್ ದಾಸ್, ಕಾರ್ಯ ದರ್ಶಿ ಅಶೋಕ್ ಕೊಂಚಾಡಿ, ರಮೇಶ್ ಕೋಟ್ಯಾನ್, ಸುಧಾಕರ್ ಬೋಳೂರು, ಎಸ್ಪಿ ಆನಂದ್,  ಕಾಂಗ್ರೆಸ್ ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು, ಪ್ರೇಮ್ ನಾಥ್ ಬಳ್ಳಾಲ್ ಬಾಗ್, ಶೇಖರ್ ಕುಕ್ಕೇಡಿ, ಗಣೇಶ್ ಮೂಡಬಿದ್ರಿ, ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ಅಧ್ಯಕ್ಷರಾದ ಶಿವಪ್ಪ ನಂತೂರು, ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಕೃಷ್ಣಪ್ಪ ಬಣದ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಕಮಲಾಕ್ಷ ಬಜಾಲ್, ದಲಿತ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡ್, ಹಾಗೂ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ