ಬೇರೆ ಜಾತಿಯ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನಿಗೆ ಚಿತ್ರಹಿಂಸೆ ನೀಡಿ ಕೊಲೆ
ಬೀದರ್: ಬೇರೆ ಜಾತಿಯ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ನ ಔರಾದ್ ತಾಲ್ಲೂಕಿನ ಠಾಣಾ ಕುಶನೂರ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಭೇಡಕುಂದಾ ಗ್ರಾಮದ ನಿವಾಸಿ ಸುಮಿತ್ (19) ಜಾತಿ ದ್ವೇಷಿಗಳ ದುಷ್ಕೃತ್ಯದಿಂದ ಪ್ರಾಣ ಕಳೆದುಕೊಂಡ ಯುವಕನಾಗಿದ್ದಾನೆ.
ರಕ್ಷಾಳ್ ಗ್ರಾಮದ ಬಾಲಕಿಯನ್ನು ಸುಮಿತ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಭಾನುವಾರ “ನಮ್ಮ ಮನೆಗೆ ಬಾ” ಎಂದು ಸುಮಿತ್ ನನ್ನು ಬಾಲಕಿ ಕರೆದಿದ್ದಳು. ಹೀಗಾಗಿ ಸುಮಿತ್ ಆಕೆಯ ಮನೆಗೆ ಹೋಗಿದ್ದ ವೇಳೆ ಹುಡುಗಿಯ ಅಪ್ಪ ಮತ್ತು ಅಣ್ಣ ಹಾಗೂ ಸಂಬಂಧಿಕರು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ.
ಬಳಿಕ ಸುಮಿತ್ ಮನೆಯಿಂದ ಹೊರ ಹೋದ ಬಳಿಕ ಬಾಲಕಿಯ ಅಣ್ಣ ಮತ್ತು ಆತನ ಸ್ನೇಹಿತರು ಮತ್ತೆ ಸುಮಿತ್ ನ ಮೇಲೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಸುಮಿತ್ ನ ಮನೆಗೆ ಕರೆ ಮಾಡಿ ಆತನನ್ನು ಕರೆದೊಯ್ಯುವಂತೆ ಹೇಳಿದ್ದಾರೆ ಎಂದು ಮೃತ ಯುವಕ ಕುಟುಂಬಸ್ಥರು ತಿಳಿಸಿದ್ದಾರೆ.
ಮುಂದುವರಿದ ದಲಿತ ದೌರ್ಜನ್ಯ:
ಒಂದೆಡೆಯಲ್ಲಿ ರಾಜ್ಯದಲ್ಲಿ ದಲಿತ ಸಿಎಂ ವಿಚಾರಕ್ಕೆ ಹಾಲಿ ಸಚಿವರು ಮೀಟಿಂಗ್ ಗಳನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆ ದಲಿತ ದೌರ್ಜನ್ಯ ಪ್ರಕರಣಗಳು ಒಂದರ ಹಿಂದೊಂದರಂತೆ ನಡೆಯುತ್ತಲೇ ಇದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ ಯುವಕನೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಘಟನೆ ಮಾಸುವ ಮುನ್ನವೇ ಇದೀಗ ಬೀದರ್ ನಲ್ಲಿ ಕೂಡ ದಲಿತ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಆದರೂ ದಲಿತ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಅದರಲ್ಲೂ, ವಿಪಕ್ಷ ಬಿಜೆಪಿ ದಲಿತ ದೌರ್ಜನ್ಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸದೇ ಮೌನವಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: