ಜಾತಿ ಅಸಮಾನತೆ ಆಚರಿಸುವ ಕೊಳಕರಿಂದ ದಲಿತರ ಮೇಲೆ ಬಹಿಷ್ಕಾರ: ಪೊಲೀಸ್, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸ್ಪೃಷ್ಯತೆ ಜೀವಂತ - Mahanayaka

ಜಾತಿ ಅಸಮಾನತೆ ಆಚರಿಸುವ ಕೊಳಕರಿಂದ ದಲಿತರ ಮೇಲೆ ಬಹಿಷ್ಕಾರ: ಪೊಲೀಸ್, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸ್ಪೃಷ್ಯತೆ ಜೀವಂತ

daliths
20/05/2025

ಹಾರೋಹಳ್ಳಿ: (ರಾಮನಗರ) ಪ್ರಪಂಚ ಆಧುನಿಕತೆಯೊಂದಿಗೆ ವೇಗವಾಗಿ ಬೆಳೆಯುತ್ತಿದ್ದರೂ, ಜನರ ಮನಸ್ಥಿತಿಗಳು ಮಾತ್ರ ಬೆಳೆಯದೇ ಹಾಗೆಯೇ ಮುದುಡಿಕೊಂಡಿವೆ. ಅದರಲ್ಲೂ ಜಾತಿ, ಅಸಮಾನತೆಯನ್ನು ಆಚರಿಸುವ ವರ್ಗವಂತೂ ಇನ್ನೂ ತಮ್ಮ ಮನಸ್ಸಿನೊಳಗಿನ ಕೊಳಕನ್ನು ಅಪ್ಪಿಕೊಂಡು, ಆ ಕೊಳಕಿನೊಂದಿಗೆ ಇನ್ನೂ ಜೀವಿಸುತ್ತಿದ್ದಾರೆ.

ಜಾತಿ ಅವಮಾನ, ಅಸ್ಪೃಷ್ಯತೆಯಂತಹ ಪ್ರಕರಣ ನಡೆದಾಗ ತಪ್ಪಿತಸ್ಥರನ್ನು ಒದ್ದು, ಬುದ್ಧಿಕಳಿಸಬೇಕಾದ ಪೊಲೀಸರು, ಅಧಿಕಾರಿಗಳು ಸಂಧಾನ, ಸಮಾಧಾನ ಎಂದು ಜಾತಿ ಅಸಮಾನತೆ ಆಚರಿಸುವ ಕೊಳಕರನ್ನು ಓಲೈಸುತ್ತಾ, ಅಸ್ಪೃಷ್ಯತೆಯನ್ನು ಯಥಾ ಸ್ಥಿತಿಯಲ್ಲಿರುವಂತೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಇಲ್ಲಿಯವರೆಗೂ ಅಸ್ಪೃಷ್ಯತೆ ಮರೆಯಾಗಿಲ್ಲ. ಇಂತಹದ್ದೊಂದು ಘಟನೆ ಇದೀಗ ರಾಮನಗರದ ಹಾರೋಹಳ್ಳಿ ತಾಲೂಕಿನ ಮರಳವಾಡಿಯ ಬನವಾಸಿ ಗ್ರಾಮದಲ್ಲಿ ನಡೆದಿದ್ದು, ಈ ಗ್ರಾಮದಲ್ಲಿ ಅಸ್ಪೃಷ್ಯತೆ ಜೀವಂತವಾಗಿದೆ.

ಗ್ರಾಮದ ಜಾತ್ರೆಯಲ್ಲಿ ನಮ್ಮನ್ನೂ ಸೇರಿಸಿಕೊಳ್ಳಿ, ನಮ್ಮನ್ನೂ ಎಲ್ಲರಂತೆ ಕಾಣಿ ಎಂದ ದಲಿತರಿಗೆ ನೀರು, ದಿನಸಿ ಪದಾರ್ಥ ನೀಡದಂತೆ ತಾಕೀತು ಮಾಡಿ ಜಾತಿ ಅಸಮಾನತೆ ಆಚರಿಸುವ ಕೆಲವು ಕೊಳಕರು ಸೇರಿಕೊಂಡು ಬಹಿಷ್ಕಾರ ಹಾಕಿಸಿರುವ ಘಟನೆ ಈ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ಸಂಬಂಧ ಕ್ರಮಕೈಗೊಳ್ಳುವಂತೆ ದಲಿತರು, ತಾಲೂಕು ಆಡಳಿತ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇಲ್ಲಿನ ತಹಶೀಲ್ದಾರ್ ಕಾನೂನು ಪ್ರಕಾರ ಕ್ರಮಕೈಗೊಳ್ಳದೇ, ಪಂಚಾಯ್ತಿ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನೀವೆಷ್ಟು ಪಂಚಾಯ್ತಿ ನಡೆಸಿದರೂ, ಜಾತಿ ಅಸಮಾನತೆ ಆಚರಿಸುವ ಕೊಳಕರು ಸುಧಾರಿಸುವುದಿಲ್ಲ, ಅವರನ್ನು ಒದ್ದು ಒಳಗೆ ಹಾಕಿ ಕಾನೂನು ಪ್ರಕಾರ ಕ್ರಮಕೈಗೊಳ್ಳಿ ಎನ್ನುವ ಒತ್ತಾಯ ಕೇಳಿ ಬಂದಿದೆ.

ಬನವಾಸಿ ಗ್ರಾಮದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ವಿಚಾರದಲ್ಲಿ ಮೂರು ಹಳ್ಳಿಗಳ ಸಾರ್ವಜನಿಕ ಪೂರ್ವಭಾವಿ ಸಭೆ ನಡೆದಿದೆ. ಈ ಸಭೆಯಲ್ಲಿ ದಲಿತ ಮುಖಂಡರು, ನಮಗೂ ಕೂಡ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಈ ವೇಳೆ ದಲಿತರ ಮಾತಿಗೆ ಕಿಡಿಕಾರಿದ ಜಾತಿ ಅಸಮಾನತೆ ಆಚರಿಸುವ ಕೊಳಕರು, ನಿಮ್ಮ ಅಪ್ಪ, ತಾತ ಹಾಗೂ ಹಿಂದಿನವರು ಹೇಗೆ ನಡೆದು–ಕೊಂಡಿದ್ದಾರೋ ಅದೇ ರೀತಿ ನಡೆದುಕೊಳ್ಳುವ ಮೂಲಕ ಹಿಂದಿನ ಸಂಪ್ರದಾಯವನ್ನು ಪಾಲಿಸಿ ಎಂದು ಅಸ್ಪೃಷ್ಯತೆ ಆಚರಣೆ ಜೀವಂತವಿಡುವ ತಮ್ಮ ಉದ್ದೇಶವನ್ನು ಹೇರಿದ್ದಾರೆ.

ಅಷ್ಟೇ ಅಲ್ಲ, ದಲಿತ ವ್ಯಕ್ತಿಯನ್ನೇ ಬಳಸಿಕೊಂಡು ದಲಿತರಿಂದ ಇನ್ನು ಮುಂದೆ ನೀರನ್ನು ಮುಟ್ಟಿಸಬಾರದು, ಅಂಗಡಿಗಳಲ್ಲಿ ದಿನಸಿ, ಹಾಲನ್ನೂ ಕೂಡ ಹಾಕಿಸಿಕೊಳ್ಳಬಾರದು. ಕೃಷಿ ಚಟುವಟಿಕೆಗಳಿಗೆ ದಲಿತರನ್ನು ಬಳಸಿಕೊಳ್ಳಬಾರದು ಇದಕ್ಕೆ ತಪ್ಪಿ ಯಾರಾದರೂ ನಡೆದುಕೊಂಡರೆ ಹತ್ತು ಸಾವಿರ ರೂ. ದಂಡ ಹಾಕಲಾಗುವುದು ಎಂದು ಡಂಗೂರ ಸಾರಿಸಿದ್ದಾರಂತೆ.

ಪೊಲೀಸರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸ್ಪೃಷ್ಯತೆ ಜೀವಂತ:

ಇಂದಿಗೂ ಅಸ್ಪೃಷ್ಯತೆ ಜೀವಂತವಾಗಿದೆ ಎಂದರೆ ಅದಕ್ಕೆ ಪೊಲೀಸರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅಸ್ಪೃಷ್ಯತೆ ಆಚರಣೆಯಂತಹ ಪ್ರಕರಣ ಬೆಳಕಿಗೆ ಬಂದಾಗ ಸಂಧಾನ ನಡೆಸಿ, ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ. ಇದರಿಂದಾಗಿ ಅಸ್ಪೃಷ್ಯತೆ ಆಚರಣೆ ಮಾಡುವವರಿಗೆ ಇನ್ನಿಲ್ಲದ ಧೈರ್ಯ ಬರುತ್ತಿದೆ. ಪ್ರತೀ ವರ್ಷವೂ ಜಾತ್ರೆಗಳಂತ ಉತ್ಸವಗಳು ಬರುವಾಗ ದಲಿತರಿಗೆ ಮತ್ತೆ ಮತ್ತೆ ಅವಮಾನ ಮಾಡುತ್ತಲೇ ಇರುತ್ತಾರೆ. ಅಸ್ಪೃಷ್ಯತೆ ಪ್ರಕರಣಗಳು ಬಂದಾಗ ಅಧಿಕಾರಿಗಳು ಕಾನೂನಿನಲ್ಲಿ ಏನಿದೆಯೋ ಆ ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ತಕ್ಷಣವೇ ಆರೋಪಿಗಳನ್ನು ಬಂಧಿಸಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಆಗಲೇ ಅಸ್ಪೃಷ್ಯತೆ ಮರೆಯಾಗಲು ಕಾರಣವಾಗುತ್ತದೆ. ಇಲ್ಲವಾದರೆ ಕಾನೂನಿನ ಭಯವಿಲ್ಲದೇ ಕೊಳಕು ಆಚರಣೆ ಮುಂದುವರಿಯುತ್ತಲೇ ಇರುತ್ತದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ