ದಿಲ್ಲಿ ಹಿಂಸಾಚಾರ: ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೆ ಪೊಲೀಸರ ವಿರೋಧ
2020ರಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ವಿರುದ್ಧ ಎಫ್ಐಆರ್ ದಾಖಲಿಸುವುದನ್ನು ದೆಹಲಿ ಪೊಲೀಸರು ನ್ಯಾಯಾಲಯದಲ್ಲಿ ವಿರೋಧಿಸಿದ್ದಾರೆ.
ಈಗ ಕಪಿಲ್ ಮಿಶ್ರ ಅವರು ದೆಹಲಿ ಸರಕಾರದಲ್ಲಿ ಸಚಿವರಾಗಿದ್ದಾರೆ ಇವರನ್ನು ಈ ಪ್ರಕರಣದಲ್ಲಿ ಆರೋಪಿಯಾಗಿ ಸೇರಿಸಬೇಕು ಎಂದು ಹಿಂಸಾಚಾರ ನಡೆದಿರುವ ಯಮುನಾ ವಿಹಾರದ ಮೊಹಮ್ಮದ್ ಇಲ್ಯಾಸ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪೊಲೀಸರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಗಲಭೆಗೆ ಪ್ರಚೋದನೆ ನೀಡುವ ಅವರ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಹಿಂಸಾಚಾರದಲ್ಲಿ ಕಪಿಲ್ ಮಿಶ್ರ ಅವರಿಗೆ ಯಾವುದೇ ಪಾತ್ರ ಇಲ್ಲ. ಅವರನ್ನು ಆರೋಪಿಯಾಗಿಸುವುದರ ಹಿಂದೆ ಸಂಚು ಅಡಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ದೆಹಲಿ ಹಿಂಸಾಚಾರದಲ್ಲಿ ಕಪಿಲ್ ಮಿಶ್ರ ಅವರ ಪಾತ್ರದ ಬಗ್ಗೆ ತನಿಖಿಸುವಲ್ಲಿ ಒಂದೋ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಅಥವಾ ಅವರು ಸತ್ಯವನ್ನು ಅಡಗಿಸುತ್ತಿದ್ದಾರೆ ಎಂದು ದೆಹಲಿ ನ್ಯಾಯಾಲಯ ಈ ಮೊದಲು ಆರೋಪಿಸಿತ್ತು. ಕಪಿಲ್ ಮಿಶ್ರಾ ಅವರಲ್ಲದೇ ದಯಾಲ್ ಪೂರ್ ನ ಸ್ಟೇಷನ್ ಪೊಲೀಸ್ ಆಫೀಸರ್, ಬಿಜೆಪಿ ಎಂಎಲ್ಎ ಮೋಹನ್ ಸಿಂಗ್ ಬಿಸ್ಟ್, ಬಿಜೆಪಿ ಮಾಜಿ ಎಂಎಲ್ಎ ಆಗಿರುವ ಜಗದೀಶ್ ಪ್ರಧಾನ್, ಸತ್ಪಾಲ್ ಸಂಸದ್ ಎಂಬವರ ಸಹಿತ ಐದು ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದು ಕೋರಿ ಇಲ್ಯಾಸ್ ನ್ಯಾಯಾಲಯದ ಬಾಗಿಲು ತಟ್ಟಿದ್ದರು.
ಎನ್ ಆರ್ ಸಿ ಹೋರಾಟಗಾರರ ವಿರುದ್ಧ ಕಪಿಲ್ ಮಿಶ್ರ ನಡೆಸಿದ ಭಾಷಣದ ಬಳಿಕವೇ 2020 ಫೆಬ್ರವರಿಯಲ್ಲಿ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಜಾಫರ್ ಬಾದ್ ನಲ್ಲಿ ಪೌರತ್ವ ಹೋರಾಟಗಾರರನ್ನು ಮೂರು ದಿನಗಳೊಳಗೆ ತೆರವುಗೊಳಿಸದಿದ್ದರೆ ತಾನೇ ಅವರನ್ನು ತೆರವುಗೊಳಿಸುವುದಾಗಿ ಕಪಿಲ್ ಮಿಶ್ರ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಿಗೆ ದೆಹಲಿಯಲ್ಲಿ ಹಿಂಸಾಚಾರ ಸ್ಪೋಟಿಸಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj




























