ದೀಪಾವಳಿ ಮುಂದೂಡಿಕೆ: 6 ಊರುಗಳಲ್ಲಿ ಮುಂದಕ್ಕೆ ಹೋದ ಬೆಳಕಿನ ಹಬ್ಬ - Mahanayaka
11:56 PM Thursday 21 - August 2025

ದೀಪಾವಳಿ ಮುಂದೂಡಿಕೆ: 6 ಊರುಗಳಲ್ಲಿ ಮುಂದಕ್ಕೆ ಹೋದ ಬೆಳಕಿನ ಹಬ್ಬ

chamarajanagara
11/11/2023


Provided by

ಚಾಮರಾಜನಗರ: ಬೆಳಕಿನ ಹಬ್ಬ ದೀಪಾವಳಿ ಇಡೀ ದೇಶಾದ್ಯಂತ ಆಚರಣೆ ಮಾಡಲು ಜನರು ಕಾತರದಿಂದ ಕಾಯುತ್ತಿದ್ದರೇ ಈ 6 ಊರುಗಳು ಮಾತ್ರ ಹಬ್ಬವನ್ನು ಒಂದು ವಾರ ಮುಂದಕ್ಕೆ ಹಾಕಿದ್ದಾರೆ.‌

ಹೌದು…, ಅಚ್ಚರಿಯಾದರೂ ಸತ್ಯ. ದೀಪಾವಳಿ ಬಂತೆಂದರೆ ಸಡಗರ-ಸಂಭ್ರಮ, ಚಿಣ್ಣರಿಗೆ ಪಟಾಕಿ ಹಚ್ಚುವ ಖುಷಿ, ಹಿರಿಯರಿಗೆ ದೀಪ ಬೆಳುಗುವ ಸಂತಸ. ಆದರೆ ಮಂಗಳವಾರ ದೇಶಾದ್ಯಂತ ಆಚರಿಸುವ ಸಂಭ್ರಮದ ಬೆಳಕಿನ ಹಬ್ಬವನ್ನು ಗುಂಡ್ಲುಪೇಟೆ ತಾಲೂಕಿನ 6 ಊರುಗಳು ಹಬ್ಬದ ನಂತರ ವಾರದಲ್ಲಿ ಬುಧವಾರ ಆಚರಿಸುತ್ತವೆ.

ಗುಂಡ್ಲುಪೇಟೆ ತಾಲೂಕಿನ 6 ಗ್ರಾಮಗಳಲ್ಲಿ ಹಬ್ಬದ ಸಂತಸವೇ ಇಲ್ಲ. ಕಾರಣ ಈ ಬಾರಿ ಹಬ್ಬ ಮಂಗಳವಾರ ಬಂದಿರುವುದು. ಗುಂಡ್ಲುಪೇಟೆ ತಾಲೂಕಿನ ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ದೀಪಾವಳಿಯ ಬಲಿ ಪಾಡ್ಯಮಿ ಬುಧವಾರ ಬಂದರೆ ಮಾತ್ರ ಹಬ್ಬ ಆಚರಿಸಲಿದ್ದು, ಇಲ್ಲದಿದ್ದರೆ ಮುಂದಿನ ಬುಧವಾರವೇ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ.

ದೀಪಾವಳಿ ಹಬ್ಬದ ಸಂಭ್ರಮ, ಹೊಸ ಬಟ್ಟೆ ತೊಡುವುದು, ಪಟಾಕಿ ಸಿಡಿಸುವುದು, ಮನೆಯಲ್ಲಿ ಸಿಹಿ ಊಟ ಎಲ್ಲವೂ ಬುಧವಾರವೇ ನಡೆಯಲಿದ್ದು, ಕಳೆದ ಮೂರು ತಲೆಮಾರುಗಳಿಂದ ಈ ಆರು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ.

ಬುಧವಾರವೇ ಹಬ್ಬ ಏಕೆ..?:

ಅಷ್ಟಕ್ಕೂ ಬುಧವಾರವೇ ಏಕೆ ಈ ಆರು ಗ್ರಾಮಗಳು ದೀಪಾವಳಿ ಮಾಡಲಿವೆ ಎಂಬ ಕುತೂಹಲಕ್ಕೆ ಉತ್ತರ ಗ್ರಾಮಸ್ಥರಲ್ಲಿ ಮನೆ ಮಾಡಿರುವ ಆತಂಕ. ಬುಧವಾರ ಹೊರತುಪಡಿಸಿ ಹಬ್ಬ ಆಚರಿಸಿದರೆ ಏನಾದರೂ ಕೆಡಕಾಗಬಹುದು, ದನಗಳಿಗೆ ಏನಾದರೂ ತೊಂದರೆ ಆಗಬಹುದು ಎಂಬ ಆತಂಕದಿಂದ ಈ ನಿರ್ಧಾರಕ್ಕೆ ಬಂದಿದ್ದಾರಂತೆ ಗ್ರಾಮಸ್ಥರು.

ಈ ಕುರಿತು ವೀರನಪುರ ಗ್ರಾಮದ ಹಿರಿಯರಾದ ಸೋಮಪ್ಪ ಎಂಬವರು  ಮಾತನಾಡಿ, ತಲೆಮಾರುಗಳ ಹಿಂದೆ ಒಮ್ಮೆ ಬುಧವಾರ ಹೊರತುಪಡಿಸಿ ಹಬ್ಬ ಆಚರಿಸಿದಾಗ ಏರಿಗೆ ಕಟ್ಟಿದ ಎತ್ತುಗಳಿಗೆ ಅನಾರೋಗ್ಯ ಉಂಟಾದ ನಿದರ್ಶನವಿರುವುದರಿಂದ ಹಿಂದಿನವರು ಹಾಕಿಕೊಟ್ಟ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ನಾವು ಆರು ಗ್ರಾಮದವರು ಒಂದೇ ದಿನ ಹಬ್ಬ ಆಚರಿಸಲಿದ್ದು, ಇದು ಮುಂದೆಯೂ ಕೂಡ ಪಾಲನೆಯಾಗಲಿದೆ. ಲೋಕವೆಲ್ಲಾ ಕ್ಯಾಲೆಂಡರ್ ಪ್ರಕಾರ ಹಬ್ಬದ ದಿನವೇ ಬೆಳಕಿನ ಹಬ್ಬ ಆಚರಿಸಿದರೆ ನಾವು ಬುಧವಾರ ಆಚರಿಸುತ್ತೇವೆ ಎಂದರು.

ವೀರನಪುರ ಗ್ರಾಮದ ಯುವಕರಾದ ರಮೇಶ್, ನಾಗಪ್ಪ ಎಂಬವರು  ಮಾತನಾಡಿ, ತಾತ, ಮುತ್ತಾತ ಕಾಲದಿಂದಲೂ ಬುಧವಾರ ದಿನದಂದೇ ಬೆಳಕಿನ ಹಬ್ಬ ಆಚರಣೆ ಮಾಡುತ್ತೇವೆ. ಬಲಿಪಾಡ್ಯಮಿ ಬುಧವಾರ ಬಂದರೇ ಅಂದೆ ಮಾಡುತ್ತೇವೆ ಇಲ್ಲವೇ ಅದಾದ ನಂತರದ ಬುಧವಾರ ಹಬ್ಬ ಆಚರಣೆ ಮಾಡುತ್ತೇವೆ, ತಲೆಮಾರುಗಳ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ತಲೆಮಾರುಗಳ ನಂಬಿಕೆಯಂತೆ  ಮುಂದಿನ ಬುಧವಾರವೇ ಈ 6 ಗ್ರಾಮಗಳಲ್ಲಿ ಬೆಳಕಿನ ಹಬ್ಬ ನಡೆಯಲಿದೆ, ಈಗ ಬರುವ ಬಲಿಪಾಡ್ಯಮಿ ದಿನ ಎಂದಿನಂತೆ ಸಾಮಾನ್ಯ ದಿನವನ್ನಾಗಿ ಇವರು ಕಳೆಯಲಿದ್ದು ಯಾವುದೇ ಪಟಾಕಿ ಸಿಡಿಸುವುದು, ಹೊಸ ಬಟ್ಟೆ ತೊಡುವುದು ಮಾಡುವುದಿಲ್ಲ.

ಇತ್ತೀಚಿನ ಸುದ್ದಿ