ದುಬೈ-ಅಮೃತಸರ ಏರ್ ಇಂಡಿಯಾ ವಿಮಾನ ಇದ್ದಕ್ಕಿದ್ದಂತೆ ಕರಾಚಿಗೆ ಪ್ರಯಾಣ: ಪ್ರಯಾಣಿಕರು ಆತಂಕಗೊಂಡಿದ್ಯಾಕೆ..? ಅಷ್ಟಕ್ಕೂ ನೈಜವಾಗಿ ನಡೆದಿದ್ದೇನು..?

ದುಬೈನಿಂದ ಅಮೃತಸರಕ್ಕೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ತುರ್ತು ವೈದ್ಯಕೀಯ ವ್ಯವಸ್ಥೆ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ ಅನಾರೋಗ್ಯಪೀಡಿತ ಪ್ರಯಾಣಿಕರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಚಿಕಿತ್ಸೆ ನೀಡಿ ಹಾರಾಟಕ್ಕೆ ಅನುಮತಿ ನೀಡಿದ ನಂತರ ವಿಮಾನವು ಕರಾಚಿಯಿಂದ ಅಮೃತಸರಕ್ಕೆ ಮಧ್ಯಾಹ್ನ 2.30 ಕ್ಕೆ ಹೊರಟಿತು.
ಈ ಕುರಿತು ಮಾತನಾಡಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಕ್ತಾರರು, “ನಮ್ಮ ದುಬೈ-ಅಮೃತಸರ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ವಿಮಾನದಲ್ಲಿ ಹಠಾತ್ ಅನಾರೋಗ್ಯ ಕಾಣಿಸಿಕೊಂಡಿತು. ಹೀಗಾಗಿ ವಿಮಾನ ಸಿಬ್ಬಂದಿ ಕರಾಚಿಗೆ ತಿರುಗಿಸಲು ನಿರ್ಧರಿಸಿದರು. ಯಾಕೆಂದರೆ ಇದು ತಕ್ಷಣದ ವೈದ್ಯಕೀಯ ನೆರವು ನೀಡಲು ಹತ್ತಿರದ ಸ್ಥಳವಾಗಿತ್ತು.
ದುಬೈನಿಂದ ಸ್ಥಳೀಯ ಕಾಲಮಾನ ಬೆಳಗ್ಗೆ 8.51ಕ್ಕೆ ಹೊರಟ ವಿಮಾನ ಮಧ್ಯಾಹ್ನ 12.30ಕ್ಕೆ ಕರಾಚಿಗೆ ಬಂದಿಳಿಯಿತು.
ವಿಮಾನಯಾನವು ವಿಮಾನ ನಿಲ್ದಾಣ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸಿತು. ವಿಮಾನ ಕರಾಚಿಯಲ್ಲಿ ಲ್ಯಾಂಡ್ ಆದ ನಂತರ ಪ್ರಯಾಣಿಕನಿಗೆ ತಕ್ಷಣದ ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು. ಕರಾಚಿಯ ವಿಮಾನ ನಿಲ್ದಾಣದ ವೈದ್ಯರು ಅಗತ್ಯ ಔಷಧಿಗಳನ್ನು ನೀಡಿದರು. ಕರಾಚಿಯಿಂದ ಅಮೃತಸರಕ್ಕೆ ತೆರಳುತ್ತಿದ್ದ ವಿಮಾನವು ಸ್ಥಳೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಹೊರಟಿತು ಎಂದು ವಿಮಾನ ವಕ್ತಾರರು ತಿಳಿಸಿದ್ದಾರೆ.