ಮಿತಿಮೀರಿದ ಮಾನವ—ಕಾಡು ಪ್ರಾಣಿಗಳ ಸಂಘರ್ಷ: ರೈತರ ತೋಟಕ್ಕೆ ನುಗ್ಗಿ ಕಾಡಾನೆಗಳಿಂದ ದಾಂಧಲೆ

ಚಿಕ್ಕಮಗಳೂರು: ಕಾಡು ಹಾಗೂ ನಾಡಿನ ನಡುವೆ ಸಮರ ಚಿಕ್ಕಮಗಳೂರಿನಲ್ಲಿ ಜೋರಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಇಲ್ಲಿನ ರೈತರು, ಸಾರ್ವಜನಿಕರು ತತ್ತರಿಸಿದ್ದಾರೆ.
ಇದೀಗ ಚಿಕ್ಕಮಗಳೂರಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮಕ್ಕೆ ಕಾಡಾನೆಗಳ ಆಗಮನವಾಗಿದೆ. ಇಲ್ಲಿರುವ ತೋಟಗಳಿಗೆ ನುಗ್ಗಿ ಅಡಿಕೆ, ಬಾಳೆ, ಕಾಫಿ, ಮೆಣಸುಗಳನ್ನು ಆನೆಗಳು ನಾಶ ಮಾಡಿವೆ.
ಆನೆ ದಾಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಾರ್ಮಾಡಿ ಘಾಟ್ ರಸ್ತೆ ಪಕ್ಕದ ತರುವೆ ಗ್ರಾಮದ ರೈತ ನವೀನ್ ಎಂಬುವವರ ತೋಟಕ್ಕೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿವೆ.
ಕೊಟ್ಟಿಗೆಹಾರ ಸುತ್ತಮುತ್ತ ಗ್ರಾಮಗಳಲ್ಲಿ ಆನೆ ದಾಳಿ ಆತಂಕ ಸೃಷ್ಟಿಯಾಗಿದೆ. ಇದರಿಂದಾಗಿ ಕಾಫಿ ತೋಟದ ಕೂಲಿಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಬೆಳೆ ನಷ್ಟ, ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.
3–4 ತಿಂಗಳಿಂದ ಮೂಡಿಗೆರೆಯಲ್ಲಿ ನಿರಂತರ ಕಾಡಾನೆ ದಾಳಿ ನಡೆಯುತ್ತಿದೆ. ಆದರೂ, ಕಾಡಾನೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth