ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ವೇಳೆ ಟಿವಿ ಆಫ್ ಮಾಡಿದ್ದಕ್ಕೆ ತಂದೆಯಿಂದ ಮಗನ ಬರ್ಬರ ಹತ್ಯೆ!

22/11/2023
ಲಕ್ನೋ: ಭಾರತ –ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಟಿವಿ ಸ್ವಿಚ್ ಆಫ್ ಮಾಡಿದ್ದರಿಂದ ಆಕ್ರೋಶಗೊಂಡ ತಂದೆ ತನ್ನ ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಂದೆ ಗಣೇಶ್ ಪ್ರಸಾದ್ ಎಂಬಾತ ಟಿವಿ ನೋಡುತ್ತಿದ್ದ ವೇಳೆ, ಪುತ್ರ ದೀಪಕ್ ರಾತ್ರಿ ಊಟಕ್ಕೆ ಆಹಾರ ಸಿದ್ಧಪಡಿಸುವಂತೆ ಹೇಳಿದ್ದಾನೆ. ಮಗನ ಮಾತಿಗೆ ತಂದೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯವಹಿಸಿದಾಗ, ಮಗ ಆಕ್ರೋಶಗೊಂಡು ಟಿವಿ ಆಫ್ ಮಾಡಿದ್ದಾನೆ.
ಈ ವಿಚಾರವಾಗಿ ತಂದೆ ಹಾಗೂ ಮಗನ ನಡುವೆ ಪರಸ್ಪರ ಮಾತಿನ ಘರ್ಷಣೆ ಉಂಟಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಎಲೆಕ್ಟ್ರಿಕ್ ಕೇಬಲ್ ವಯರ್ ನಿಂದ ಗಣೇಶ್ ಪ್ರಸಾದ್ ತನ್ನ ಪುತ್ರನ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ.
ಗಣೇಶ್ ಪ್ರಸಾದ್ ಮದ್ಯ ವ್ಯಸನಿಯಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮಗನ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೀಗ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.