ಯಾದಗಿರಿಯಲ್ಲಿ ಭೀಭತ್ಸ: ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ಕೊಂದ ತಂದೆ; ಕೊಲೆ ಕೇಸ್ ದಾಖಲು - Mahanayaka
1:58 PM Wednesday 9 - September 2026

ಯಾದಗಿರಿಯಲ್ಲಿ ಭೀಭತ್ಸ: ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ಕೊಂದ ತಂದೆ; ಕೊಲೆ ಕೇಸ್ ದಾಖಲು

yadagiri.jpg
20/08/2026

ಯಾದಗಿರಿ: ತನ್ನದೇ ಇಬ್ಬರು ಹಸುಗೂಸುಗಳನ್ನು ಕಾಲುವೆಗೆ ಎಸೆದು ಕೊಲೆ ಮಾಡಿರುವ ಭೀಕರ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಸಮೀಪ ನಡೆದಿದೆ. ಈ ಸಂಬಂಧ ಆರೋಪಿ ತಂದೆ ಶಾಂತಪ್ಪ ಎಂಬುವವನ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಶಾಂತಪ್ಪ ಮಧ್ಯಾಹ್ನ ಸುಮಾರು 2:15ರ ವೇಳೆಗೆ ತನ್ನ ಮೂವರು ಮಕ್ಕಳೊಂದಿಗೆ ಮನೆಯಿಂದ ಹೊರಟು ಬೈಕ್ನಲ್ಲಿ ಕಾಲುವೆ ಬಳಿ ತೆರಳಿದ್ದಾನೆ. ಬಳಿಕ 9 ವರ್ಷದ ಸಾನ್ವಿ ಹಾಗೂ 3 ವರ್ಷದ ಸೃಜನ್ ಎಂಬ ಇಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿ ಎಸೆದಿದ್ದಾನೆ.
ಘಟನೆಯ ನಂತರ ಆರೋಪಿ ಶಾಂತಪ್ಪ ಸ್ವತಃ 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲುವೆಗೆ ತನ್ನ ಮಕ್ಕಳನ್ನು ಎಸೆದಿರುವುದಾಗಿ ಮಾಹಿತಿ ನೀಡಿದ್ದನು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಾತ್ರಿ ವೇಳೆ ಶೋಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ಕಾರಣ, ಮರುದಿನ ಬೆಳಿಗ್ಗೆ ಅಗ್ನಿಶಾಮಕ ದಳ ಹಾಗೂ ಕೆಬಿಜೆಎನ್ಎಲ್ (KBJNL) ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ಮಧ್ಯಾಹ್ನದ ವೇಳೆಗೆ 3 ವರ್ಷದ ಸೃಜನ್ ಹಾಗೂ ಸಂಜೆಯ ವೇಳೆಗೆ 9 ವರ್ಷದ ಸಾನ್ವಿಯ ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.

ಆರೋಪಿ ಶಾಂತಪ್ಪ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಚಾರಣೆ ವೇಳೆ “ಮಕ್ಕಳು ತಾಯಿ ರೇಣುಕಾ ಅವರೊಂದಿಗೆ ಹೆಚ್ಚು ಆತ್ಮೀಯರಾಗಿದ್ದರು ಮತ್ತು ನನ್ನೊಂದಿಗೆ ಹೊಂದಾಣಿಕೆ ಇರಲಿಲ್ಲ” ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಅಪಹರಣ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti