ಮಂಗಳೂರು: ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರಿಂದ ದಿಢೀರ್ ದಾಳಿ; 10 ಮೊಬೈಲ್ ಫೋನ್ ಗಳು ವಶಕ್ಕೆ
ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ (ಜೈಲು) ಮೇಲೆ ಪೊಲೀಸರು ತಡರಾತ್ರಿ ಹಠಾತ್ ದಾಳಿ ನಡೆಸಿ, ನ್ಯಾಯಾಂಗ ಬಂಧನದಲ್ಲಿದ್ದ ಕೈದಿಗಳ ಬಳಿಯಿದ್ದ 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಜೈಲಿನ ‘ಎ’ ಬ್ಲಾಕ್ ನಲ್ಲಿದ್ದ ಕೈದಿಗಳು ಅಕ್ರಮವಾಗಿ ಬಚ್ಚಿಟ್ಟಿದ್ದ ಸ್ಮಾರ್ಟ್ಫೋನ್ ಗಳನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ರಿಫತ್ ಅಲಿ, ಇಬ್ರಾಹೀಂ ಖಲೀಲ್, ಅಶ್ಫಾಕ್ ಅಲಿಯಾಸ್ ಜುಟ್ಟು ಅಶ್ಫಾಕ್, ಅರ್ಷದ್, ದಾವೂದ್ ಫರ್ವೇಝ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದಿಕ್ ಮತ್ತು ಅರ್ಫಾಝ್ ಎಂಬ ಕೈದಿಗಳ ಬಳಿ ಈ ಮೊಬೈಲ್ ಫೋನ್ ಗಳು ಪತ್ತೆಯಾಗಿವೆ.
ಕೊಲೆ ಪ್ರಕರಣದ ಆರೋಪಿಗಳು:
ಕೈದಿಗಳಾದ ರಿಫತ್ ಅಲಿ, ಇಬ್ರಾಹೀಂ ಖಲೀಲ್, ಅಶ್ಫಾಕ್ ಮತ್ತು ಅರ್ಷದ್ ಇವರುಗಳು ಇತ್ತೀಚೆಗೆ ತೊಕ್ಕೊಟ್ಟು ಬಳಿ ನಡೆದಿದ್ದ ಆರಿಫ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.
ಡ್ರಗ್ಸ್ ಮತ್ತು ಇತರ ಪ್ರಕರಣಗಳು:
ದಾವೂದ್ ಫರ್ವೇಝ್, ನಝರತ್ ಅಲಿ, ಶಿಫಾನ್ ಹಾಗೂ ಅಬ್ದುಲ್ ಸಾದಿಕ್ ಡ್ರಗ್ಸ್ ಪೆಡ್ಲಿಂಗ್ ಆರೋಪಿಗಳಾಗಿದ್ದರೆ, ಅರ್ಫಾಝ್ ‘ಕೊಕಾ’ (COCA) ಪ್ರಕರಣದ ಆರೋಪಿಯಾಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಬಿಎನ್ನೆಸ್ ಕಾಯ್ದೆಯ ಕಲಂ 323 ಹಾಗೂ ಕರ್ನಾಟಕ ಕಾರಾಗೃಹ ಕಾಯ್ದೆ ಕಲಂ 42ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೈಲಿಗೆ ಮೊಬೈಲ್ ಫೋನ್ ಗಳು ಹೇಗೆ ಮತ್ತು ಯಾರ ಮೂಲಕ ಸರಬರಾಜಾಗಿವೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























