ಮಾಜಿ ಶಾಸಕ ಕೆ.ರಘುಪತಿ ಭಟ್ ಪತ್ನಿ ಸಾವು ಪ್ರಕರಣ: ನಕಲಿ ದಾಖಲೆ ಸೃಷ್ಠಿ ಆರೋಪಿಗೆ ಜೈಲು ಶಿಕ್ಷೆ - Mahanayaka
4:46 AM Saturday 25 - October 2025

ಮಾಜಿ ಶಾಸಕ ಕೆ.ರಘುಪತಿ ಭಟ್ ಪತ್ನಿ ಸಾವು ಪ್ರಕರಣ: ನಕಲಿ ದಾಖಲೆ ಸೃಷ್ಠಿ ಆರೋಪಿಗೆ ಜೈಲು ಶಿಕ್ಷೆ

atul rao
11/11/2023

ಉಡುಪಿ: 15 ವರ್ಷಗಳ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಆರೋಪದಲ್ಲಿ ಆರೋಪಿ ಅತುಲ್ ರಾವ್ ಗೆ ಒಂದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.

ಅತುಲ್ ರಾವ್ 2008ರ ಜೂ.10ರಂದು ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆ ಯಾಗಲು ಸಹಾಯ ಮಾಡಿ ನಕಲಿ ದಾಖಲೆ ಸೃಷ್ಟಿ ಸಿ ಆಕೆಗೆ ದೆಹಲಿಯಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದನು.

ಈ ಬಗ್ಗೆ ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿ, ಬಳಿಕ ಸಿಓಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಆರೋಪಿ ವಿರುದ್ಧ ಸಿಓಡಿ ಪೊಲೀಸರು 2008ರ ಆ.22ರಂದು ಪ್ರಾರಂಭಿಕ ಮತ್ತು 2009ರ ಜು.29ರಂದು ಅಂತಿಮ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಠಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರು ಪಡಿಸಿ ದುರುಪಯೋಗ ಪಡಿಸಿರುವ ಬಗ್ಗೆ ಆರೋಪ ಮಾಡಲಾಗಿತ್ತು.ಇದರಲ್ಲಿ ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾಳ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷದ ಕೊರತೆ ಹಿನ್ನೆಲೆಯಲ್ಲಿ ಸಿಓಡಿ ಅಧಿಕಾರಿಗಳು ಕೈಬಿಟ್ಟಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಐಪಿಸಿ 468ಕಾಯಿದೆಯಡಿ ಒಂದು ವರ್ಷ ಜೈಲುಶಿಕ್ಷೆ ಮತ್ತು 5000ರೂ. ದಂಡ, ಐಪಿಸಿ 417, 465, 471 ಕಾಯಿದೆಯಡಿ ತಲಾ ಆರು ತಿಂಗಳು ಸಜೆ ಹಾಗೂ 5000ರೂ. ದಂಡ ವಿಧಿಸಿ ಆದೇಶ ನೀಡಿದರು. ಸಿಓಡಿ ಪರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಶಿವಪ್ರಸಾದ್ ಆಳ್ವ ವಾದ ಮಂಡಿಸಿದ್ದರು.

ಇತ್ತೀಚಿನ ಸುದ್ದಿ