ಔರಾದ ಪಟ್ಟಣದಲ್ಲಿ ಅದ್ದೂರಿ ತಿರಂಗಾ ಬೈಕ್ ರ‍್ಯಾಲಿ | ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಾಡಲಿ: ಶಾಸಕ ಪ್ರಭು ಚವ್ಹಾಣ
ಔರಾದ: ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಬಿಜೆಪಿ ಔರಾದ(ಬಿ) ಮಂಡಲ ವತಿಯಿಂದ ಆಗಸ್ಟ್ 14ರಂದು ಔರಾದ(ಬಿ) ಪಟ್ಟಣದಲ್ಲಿ ತಿರಂಗಾ ಬೈಕ್ ರ‍್ಯಾಲಿ ಅದ್ದೂರಿಯಾಗಿ ಜರುಗಿತು. ಪಟ್ಟಣದಾದ್ಯಂತ ತ್ರಿವರ್ಣ ಧ್ವಜಗಳು ರಾರಾಜಿಸಿದವು.
ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಔರಾದನ ಆರಾಧ್ಯದೈವ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಾಜಿ ಸೈನಿಕರಿಗೆ ಸನ್ಮಾನಿಸಿದ ನಂತರ ರ‍್ಯಾಲಿಗೆ ಚಾಲನೆ ನೀಡಿದರು. ರ‍್ಯಾಲಿಯು ಶ್ರೀ ಅಮರೇಶ್ವರ ದೇವಸ್ಥಾನದ ಹತ್ತಿರದಿಂದ ಹೊರಟು, ಡಾ.ಚನ್ನಬಸವ ಪಟ್ಟದೇವರು ವೃತ್ತ, ಕನ್ನಡಾಂಬೆ ವೃತ್ತ, ಬಸವೇಶ್ವರ ವೃತ್ತ, ತಹಸೀಲ್ ಕಛೇರಿ, ಪತ್ರಿಸ್ವಾಮಿ ಕಾಲೇಜು, ಎಪಿಎಂಸಿ ವೃತ್ತದ ಮಾರ್ಗವಾಗಿ ಬಿಜೆಪಿ ಕಛೇರಿಗೆ ಬಂದು ಕೊನೆಗೊಂಡಿತು.
ತ್ರಿವರ್ಣ ಧ್ವಜಗಳನ್ನು ಹೊಂದಿದ ಅಸಂಖ್ಯಾತ ದ್ವಿಚಕ್ರವಾಹನಗಳ ಮೇಲೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ‘ಭಾರತ ಮಾತಾಕಿ ಜೈ’, ‘ವಂದೆ ಮಾತರಂ’ ಎನ್ನುವ ಜಯಘೋಷಗಳನ್ನು ಕೂಗುತ್ತಾ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಜನಜಾಗೃತಿ ಮೂಡಿಸಿದರು. ದೇಶಭಕ್ತಿಗೀತೆಗಳಿಗೆ ಕುಣಿದು ಕುಪ್ಪಳಿಸಿದರು.
ಬಳಿಕ ಶಾಸಕರು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಬೇಕು ಮತ್ತು ಎಲ್ಲ ಜನರಲ್ಲಿ ದೇಶಭಕ್ತಿಯನ್ನು ಮೂಡಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ. ಅದರಂತೆ ದೇಶದಾದ್ಯಂತ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಔರಾದ ಪಟ್ಟಣದಲ್ಲಿಯೂ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.
ಪ್ರಧಾನಿಯವರು ದೇಶಕ್ಕಾಗಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ವಿವಿಧ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಸ್ವಚ್ಛತಾ ಅಭಿಯಾನವು ಸಾಕಷ್ಟು ಯಶಸ್ವಿಯಾಗಿದೆ. ಇದೀಗ ಎಲ್ಲ ಜನರಲ್ಲಿ ದೇಶ ಪ್ರೇಮ ಮೂಡಿಸುವ ಉದ್ದೇಶದಿಂದ ‘ಹರ್ ಘರ್ ತಿರಂಗಾ’ ಅಭಿಯಾನ ನಡೆಸಲು ಕರೆ ಕೊಟ್ಟಿದ್ದಾರೆ. ಇದರಿಂದ ದೇಶದೆಲ್ಲೆಡೆ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ. ಔರಾದ್ ಬೈಕ್ ರ‍್ಯಾಲಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ವಿಭಾಗದಲ್ಲಿಯೇ ಈ ರೀತಿಯ ಕಾರ್ಯಕ್ರಮ ಎಲ್ಲಿಯೂ ಆಗಿಲ್ಲ ಎಂದರು.
‘ಹರ್ ಘರ್ ತಿರಂಗಾ’ ಅಭಿಯಾನದಡಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಾಡಬೇಕು. ಸ್ವಾತಂತ್ರ್ಯ ದಿನಾಚರಣೆ ಮತ್ತು ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಮಹನಿಯರ ಬಗ್ಗೆ ಎಲ್ಲರಿಗೂ ತಿಳಿಯಬೇಕು. ಎಲ್ಲರಲ್ಲಿಯೂ ದೇಶಭಕ್ತಿ ಜಾಗೃತವಾಗಬೇಕು. ಈ ದಿಶೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬೇಕು. ಅಭಿಯಾನದ ವೇಳೆ ಎಲ್ಲಿಯೂ ರಾಷ್ಟಧ್ವಜಕ್ಕೆ ಅಗೌರವ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ದೇಶಭಕ್ತಿ ಗೀತೆಗೆ ಹೆಜ್ಜೆ: ರ‍್ಯಾಲಿ ವೇಳೆ ‘ಯೇ ದೇಶ್ ವೀರ್ ಜವಾನೋಂಕಾ’ ಎನ್ನುವ ದೇಶಭಕ್ತಿ ಗೀತೆಗೆ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಹೆಜ್ಜೆ ಹಾಕಿ ಗಮನ ಸೆಳೆದರು. ಈ ವೇಳೆ ಮುಖಂಡರಾದ ಈಶ್ವರಸಿಂಗ್ ಠಾಕೂರ್, ವಸಂತ ಬಿರಾದಾರ, ಧೊಂಡಿಬಾ ನರೋಟೆ ಸೇರಿದಂತೆ ಹಲವು ಮುಖಂಡರು ಕುಣಿದು ಸಂಭ್ರಮಿಸಿದರು.
ಮನೆ ಮೇಲೆ ತ್ರಿವರ್ಣ ಧ್ವಜ: ಬೈಕ್ ರ‍್ಯಾಲಿಯ ನಂತರ ಶಾಸಕರು ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ(ಬಿ) ಪಟ್ಟಣದ ಬೂತ್ ಸಂಖ್ಯೆ 14ರಲ್ಲಿರುವ ಬೂತ್ ಅಧ್ಯಕ್ಷ ಸಂತೋಷ ಪಟ್ನೆ ಅವರ ಮನೆಗೆ ಭೇಟಿ ನೀಡಿ ಅವರ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು.
ಬಿಜೆಪಿ ಜಿಲ್ಲಾ ಮುಖಂಡರಾದ ಈಶ್ವರಸಿಂಗ್ ಠಾಕೂರ್, ಕಿರಣ ಪಾಟೀಲ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಶಿವರಾಜ ಅಲ್ಮಾಜೆ, ಔರಾದ(ಬಿ) ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡರಾದ ವಸಂತ ಬಿರಾದಾರ, ಖಂಡೋಬಾ ಕಂಗಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಅಶೋಕ ಅಲ್ಮಾಜೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಶಿವಾಜಿರಾವ ಕಾಳೆ, ಪ್ರತೀಕ್ ಚವ್ಹಾಣ, ಸಚಿನ್ ರಾಠೋಡ್, ದಯಾನಂದ ಘೂಳೆ, ಸಂಜು ವಡೆಯರ್, ರಾಮರೆಡ್ಡಿ ಪಾಟೀಲ, ಗುರುನಾಥ ರಾಜಗೀರಾ, ಗುಂಡಪ್ಪ ಮುಧಾಳೆ, ಅಶೋಕ ಶೆಂಬೆಳ್ಳೆ, ರಾಮ ನರೋಟೆ, ಬಾಬು ಪವಾರ್, ವೀರಶೆಟ್ಟಿ ಅಲ್ಮಾಜೆ ಸೇರಿದಂತೆ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಕೇಂದ್ರಗಳ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸಾವಿವಾರು ಜನ ರ‍್ಯಾಲಿಯಲ್ಲಿ ಭಾಗವಹಿಸಿದರು.
ವರದಿ: ರವಿಕುಮಾರ ಶಿಂದೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: