ಲಿಫ್ಟ್ ನ ಹೊಂಡಕ್ಕೆ ಬಿದ್ದು 2 ವರ್ಷದ ಮಗುವಿನ ದಾರುಣ ಸಾವು - Mahanayaka
12:29 AM Thursday 16 - October 2025

ಲಿಫ್ಟ್ ನ ಹೊಂಡಕ್ಕೆ ಬಿದ್ದು 2 ವರ್ಷದ ಮಗುವಿನ ದಾರುಣ ಸಾವು

30/10/2020

ಬೆಂಗಳೂರು: 2 ವರ್ಷದ ಮಗುವೊಂದು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಮೃತಪಟ್ಟಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Provided by

ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ವಿನೋದ್(2) ಮೃತಪಟ್ಟ ಮಗು.  ಲಿಫ್ಟ್ ಗುಂಡಿಗೆ ಬಿದ್ದ ಪರಿಣಾಮ ತೀವ್ರವಾಗಿ ಮಗು ಗಾಯಗೊಂಡಿತ್ತು. ಸುಮಾರು 6 ಅಡಿ ಹೊಂಡಕ್ಕೆ ಮಗು ಬಿದ್ದಿದೆ.  ಗುಂಡಿಯಲ್ಲಿ ಮಳೆಯ ನೀರು ಕೂಡ ತುಂಬಿಕೊಂಡಿತ್ತು. ಇದರಿಂದಾಗಿ ಮಗು ನೀರಿನಲ್ಲಿ ಮುಳುಗಿದೆ.


ಕೊಪ್ಪಳ ಮೂಲದ ಮಗುವಿನ ಪೋಷಕರು ಕಟ್ಟಡದ ಸಮೀಪದ ಶೆಡ್ ನಲ್ಲಿ ವಾಸವಾಗಿದ್ದರು.  ಮಗುವಿನ ತಂದೆ ಬಿಜಿಎಸ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಕೆಂಗೇರಿಯ ಕೋಡಿಪಾಳ್ಯದಲ್ಲಿ ರಮೇಶ್ ಎಂಬಾತ 4 ಅಂತಸ್ಥಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದ. ಈ ಕಟ್ಟಡದ ಲಿಫ್ಟ್ ಗೆ ತೆಗೆಯಲಾಗಿದ್ದ ಗುಂಡಿಯನ್ನು ಹಾಗೆಯೇ ಬಿಡಲಾಗಿತ್ತು. ಅಲ್ಲಿ ಮಳೆ ನೀರು ತುಂಬಿ ಮರಣ ಬಾವಿಯಾಗಿ ಪರಿಣಮಿಸಿದೆ.


ಮಗು ಆಟವಾಡುತ್ತಾ ಹೋಗಿ ಗುಂಡಿಗೆ ಬಿದ್ದಿದೆ ಎಂದು ಹೇಳಲಾಗಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ನೀರಲ್ಲಿ ಮುಳುಗಿದ್ದರಿಂದಾಗಿ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಕಟ್ಟಡ ನಿರ್ಮಿಸುತ್ತಿದ್ದ ರಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.


ಇತ್ತೀಚಿನ ಸುದ್ದಿ