ಗೋರಕ್ಷಾ ಗೂಂಡಾಗಳ ಕ್ರೌರ್ಯ ಪ್ರಕರಣ: 10 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಆರು ವರ್ಷಗಳ ಹಿಂದೆ ಉತ್ತರಪ್ರದೇಶದ ಹಾಪುರ್ ನಲ್ಲಿ ನಡೆದ ಗೋರಕ್ಷಾ ಗೂಂಡಾಗಳ ಕ್ರೌರ್ಯ ನಿಮಗೆ ನೆನಪಿದೆಯೋ ಗೊತ್ತಿಲ್ಲ. ಗೋರಕ್ಷಕರು 45 ವರ್ಷದ ಖಾಸಿಂ ಎಂಬವರನ್ನು ಥಳಿಸಿ ಕೊಂದಿದ್ದರಲ್ಲದೆ 62 ವರ್ಷದ ಸಮೀಉದ್ದೀನ್ ರನ್ನು ತೀವ್ರವಾಗಿ ಗಾಯಗೊಳಿಸಿದ್ದರು. ಇದೀಗ ಅಲ್ಲಿನ ಸ್ಥಳಿಯ ನ್ಯಾಯಾಲಯ ಎಲ್ಲಾ 10 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಮಂಗೇ ರಾಮ್, ಕರಣ್ ಪಾಲ್, ರಿಂಕು ರಾನ, ಹರಿ ಓಂ, ಲಲಿತ್, ರಾಕೇಶ್, ಮನೀಶ್, ಯುಧಿಷ್ಠಿರ್, ಸೋನು ರಾನ ಮತ್ತು ಕಾನು ಎಂಬವರೇ ಶಿಕ್ಷೆಗೆ ಗುರಿಯಾದವರಾಗಿದ್ದು ಹೆಚ್ಚುವರಿ ಸೆಶನ್ ನ್ಯಾಯಾಧೀಶ ಶ್ವೇತ ದೀಕ್ಷಿತ್ ಅವರು ಇವರೆಲ್ಲರಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ. ಮಾತ್ರವಲ್ಲ ಪ್ರತಿಯೊಬ್ಬರಿಗೂ ತಲಾ 58000 ರೂಪಾಯಿ ದಂಡವನ್ನು ವಿಧಿಸಿದ್ದಾರೆ.
ಗೋ ಹತ್ಯೆ ನಡೆಸಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಇವರನ್ನು ಗೋ ರಕ್ಷಾ ಗೂಂಡಾಗಳು ಥಳಿಸಿದ್ದರು. ಮಾತ್ರವಲ್ಲ ಆ ಸಂದರ್ಭದಲ್ಲಿ ಬಿಡುಗಡೆಯಾದ ವಿಡಿಯೋದಲ್ಲಿ ಮೂವರು ಪೊಲೀಸರೂ ಕಾಣಿಸಿಕೊಂಡಿದ್ದರು. ಮೊದಲು ಪೊಲೀಸರು ಇದನ್ನು ಅಪಘಾತಕ್ಕೆ ಸಂಬಂಧಿಸಿದ ಪ್ರಕರಣ ಎಂದು ಹೇಳಿ ತಿಪ್ಪೆ ಸಾರಿಸಲು ಯತ್ನಿಸಿದ್ದರು. ಮಾತ್ರವಲ್ಲ ಸಂತ್ರಸ್ತರಲ್ಲಿ ಹಾಗೆಯೇ ಹೇಳಬೇಕೆಂದು ಬೆದರಿಸಿದ್ದರು.
ಆದರೆ ವಿಡಿಯೋ ಬಿಡುಗಡೆಗೊಂಡ ಬಳಿಕ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದರು. ಈ ಪ್ರಕರಣವನ್ನು ವಿಚಾರಿಸುತ್ತಿದ್ದ ಮೂವರು ನ್ಯಾಯಾಧೀಶರನ್ನು ಬದಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದರು. 2018ರಲ್ಲಿ ಸುಪ್ರೀಂ ಕೋರ್ಟ್ ಈ ಮೊರೆಯನ್ನು ಆಲಿಸಿತಲ್ಲದೆ ಮೀರತ್ ನ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ನ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಯುವಂತೆ ಆದೇಶಿಸಿತ್ತು.
ಇದೇ ವೇಳೆ ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಬೇಕೆಂದು ತಾವು ಬಯಸುತ್ತಿಲ್ಲ, ಕಠಿಣ ಶಿಕ್ಷೆ ಆದರೆ ಸಾಕು ಎಂದು ಸಂತ್ರಸ್ತರು ನ್ಯಾಯಾಲಯದಲ್ಲಿ ಹೇಳಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth